ಹೊಟ್ಟೆ ಕ್ಯಾನ್ಸರ್ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Advertisement

ಹುಬ್ಬಳ್ಳಿ: ಹೊಟ್ಟೆ ಕ್ಯಾನ್ಸರ್‌ನಿಂದ(ರೆಟ್ರೊ ಪೆರಿಟೋನಿಯಲ್ ಮಿಕ್ಸೈಡ್ ಸಾಕೋಮಾ) ಬಳಲುತ್ತಿದ್ದ 70 ವರ್ಷದ ವೃದ್ಧನಿಗೆ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು 3 ಗಂಟೆಗಳ ಕಾಲ ನಡೆಸಿ 5 ಕೆ.ಜಿ ಗಡ್ಡೆಯನ್ನು ಹೊರ ತೆಗೆಯುವಲ್ಲಿ ನಗರದ ಪ್ರತಿಷ್ಠಿತ ವಿವೇಕಾನಂದ ಜನರಲ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ. ಈ ಮೂಲಕ ರೋಗಿಗೆ ಮರು ಜೀವ ನೀಡಿದ್ದಾರೆ.
ಮೂಲತಃ ಉತ್ತರ ಕನ್ನಡದ ಯಲ್ಲಾಪೂರ ತಾಲೂಕಿನ ಹರಿಗದ್ದೆ ಊರಿನವರಾದ ವೆಂಕಟರಮಣ ಭಟ್(೭೦) ಶಸ್ತ್ರಚಿಕಿತ್ಸೆ ಪಡೆದವರು.
ವಿವೇಕಾನಂದ ಜನರಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಶಶಿಧರ್ ಕೆ. ಅವರ ನೇತೃತ್ವದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ತಜ್ಞ ಡಾ.ರವಿ ಕೊಪ್ಪದ, ಅರವಳಿಕೆ ತಜ್ಞ ಡಾ. ಶೀತಲ್ ಹಿರೇಗೌಡ್ರ, ಶ್ರುಶೂಷಕರಾದ ಮಾರುತಿ ಎನ್.ಕೆ., ಮುಬೀನಾ, ಮಾರ್ಗರೇಟ್ ಜಿ., ಜಾನ್ಸಿ ಹಾಗೂ ಪಲ್ಲವಿ ಅವರನ್ನೊಳಗೊಂಡ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗಮನ ಸೆಳೆದಿದ್ದಾರೆ.

ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ತಜ್ಞ ಡಾ. ಶಶಿಧರ್ ಕೆ, ಅವರು ಮಾತನಾಡಿ, ಜುಲೈ 30ರಂದು ಸತತ ಮೂರು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಹೊಟ್ಟೆಯಲ್ಲಿದ್ದ 25 ಸೆಂಟಿಮೀಟರ್ ಉದ್ದ, 18 ಸೆಂಟಿಮೀಟರ್ ಅಗಲ, 14 ಸೆಂಟಿ ಮೀಟರ್ ದಪ್ಪದ 5 ಕೆಜಿ ಗಡ್ಡೆಯನ್ನು ಹೊರ ತೆಗೆಯಲಾಗಿದೆ. ನಂತರ ಐದು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಿದರು.
ವೆಂಕಟರಮಣ ಭಟ್ ಅವರು 2021 ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಗಂಟಲಿನ ಧ್ವನಿ ಪೆಟ್ಟಿಗೆ (ವೈಸ್ ಬಾಕ್ಸ್) ತೆಗೆಯಲಾಗಿದೆ. ನಂತರ ಇದೇ ವರ್ಷ ಜುಲೈ ತಿಂಗಳಲ್ಲಿ ಹೊಟ್ಟೆ ಎಡಭಾಗದಲ್ಲಿ ಗೆಡ್ಡೆಯಿಂದ ಹೊಟ್ಟೆನೋವು, ಸುಸ್ತು ಹಾಗೂ ಊಟ ಮಾಡಲು ತೊಂದರೆಯಾಗುತ್ತಿತ್ತು. ರಕ್ತಹೀನತೆಯಿಂದ ಬಳಲುತ್ತಿದ್ದು, ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವಿವರಿಸಿದರು.
ಐದು ದಿನ ಐಸಿಯುನಲ್ಲಿ ಹೃದಯ ತಜ್ಞ ಡಾ. ಪ್ರಶಾಂತಕುಮಾರ, ಶ್ವಾಸಕೋಶ ತಜ್ಞ ಡಾ. ಅಶೋಕ ಗುರುಗುಂಟಿ, ಕಿಡ್ನಿ ತಜ್ಞೆ ಡಾ. ಎಂ. ಮಯ್ಯಾ ಹಾಗೂ ಡಾ. ನವೀದ್, ಡಾ. ದರ್ಶನ್, ಡಾ. ಸಲ್ಮಾ ಹಾಗೂ ವಿವೇಕಾನಂದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಜಯಶಂಕರ್ ಅವರು ರೋಗಿಯನ್ನು ಪರೀಕ್ಷೆ ನಡೆಸಿದ್ದು, ಈಗ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಹರಿಗದ್ದೆ ಊರಿನವರಾದ ವೆಂಕಟರಮಣ ಭಟ್ ಅವರೊಂದಿಗೆ ವಿವೇಕಾನಂದ ಜನರಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ತಜ್ಞ ಡಾ. ಶಶಿಧರ್ ಕೆ., ವಿವೇಕಾನಂದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಜಯಶಂಕರ್ ಹಾಗೂ ಸಿಇಓ ರಾಹುಲ್ ಮುಂಗೇಕರ್ ಸೇರಿದಂತೆ ಇತರರು ಇದ್ದರು.

ವೆಂಕಟರಮಣ ಭಟ್ ಅವರ ಪುತ್ರ ರಾಘವೇಂದ್ರ ಭಟ್ ಮಾತನಾಡಿ, ನಮ್ಮ ತಂದೆ ಹೊಟ್ಟೆ ನೋವು ಸಮಸ್ಯೆಯಿಂದ ಬಹಳಷ್ಟು ಬಳಲುತ್ತಿದ್ದರು. ಊಟವನ್ನು ಮಾಡುತ್ತಿರಲಿಲ್ಲ. ವಿವೇಕಾನಂದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಂತರ ಎಲ್ಲರಂತೆ ಎದ್ದು ನಡೆದಾಡುತ್ತಿದ್ದಾರೆ. ಊಟ ಮಾಡುತ್ತಿದ್ದಾರೆ ಎಂದರು.
ವಿವೇಕಾನಂದ ಆಸ್ಪತ್ರೆಯ ಸಿಇಓ ರಾಹುಲ್ ಮುಂಗೇಕರ್ ಮಾತನಾಡಿ, ರೈತಾಪಿ ಕುಟುಂಬದ ಹೊಟ್ಟೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 70 ವರ್ಷದ ವ್ಯಕ್ತಿಗೆ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದೊಂದು ಅತೀ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು. ರೈತಾಪಿ ಕುಟುಂಬವಾಗಿರುವುದರಿಂದ ಅವರಿಗೆ ಆಸ್ಪತ್ರೆ ವತಿಯಿಂದ ರಿಯಾಯಿತಿ ನೀಡಲಾಗುತ್ತಿದೆ ಎಂದರು.