ಹುಬ್ಬಳ್ಳಿ: ಅವಳಿ ನಗರದ ಜನತೆ ಪುಡಿ ರೌಡಿಗಳ ಕಾಟ, ಕಳ್ಳತನ ಹಾಗೂ ಇನ್ನೀತರ ಜಗಳಗಳಿಂದ ಪೊಲೀಸ್ ಠಾಣೆ ಮೆಟ್ಟಿಲೇರುವುದನ್ನು ಕಂಡಿರುತ್ತಾರೆ. ಆದರೆ, ಇದೀಗ ಹೆಗ್ಗಣಗಳ ಕಾಟದಿಂದ ಬೇಸತ್ತ ವ್ಯಕ್ತಿಯೋರ್ವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ತಡವಾಗಿ ಬೆಳಿಕಿಗೆ ಬಂದಿದೆ.
ಹೌದು ಹಳೇ ಹುಬ್ಬಳ್ಳಿ ಆನಂದ ನಗರದ ನಿವಾಸಿ ಅನಿಲ ಮುಂಡರಗಿಯವರು ಹೆಗ್ಗಣಗಳ ಕಾಟದಿಂದ ಮುಕ್ತಿ ನೀಡುವಂತೆ ಪೊಲೀಸ್ ಠಾಣೆಯಲ್ಲಿ ಮೇ ೨೫ರಂದು ದೂರು ದಾಖಲಿಸಿದ್ದಾರೆ.
ಅನಿಲ ಅವರ ಮನೆಯ ಸುತ್ತ ಮುತ್ತ ಇರುವ ಮನೆಗಳಲ್ಲಿ ಹೆಗ್ಗಣಗಳ ಕಾಟ ಹೆಚ್ಚಾಗಿದ್ದು, ಹೆಗ್ಗಣಗಳು ಅವರ ಮನೆಯ ಸಿಲಿಂಡರ್ ಗ್ಯಾಸ್ ಪೈಪ್ ಲೈನ್ ತಿಂದು ಹಾಕಿವೆ. ಮನೆಯಲ್ಲಿ ಎಲ್ಲೆಂದರಲ್ಲಿ ತಗ್ಗು ಮಾಡಿವೆ. ಸಿಂಕ್ ಪೈಪ್ ಲೈನ್ ಕತ್ತರಿಸಿವೆ. ಈ ಬಗ್ಗೆ ಪಕ್ಕದ ಮನೆಯವರಿಗೆ ಸಾಕಷ್ಟು ಬಾರಿ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ. ೧೫-೨೦ ಹೆಗ್ಗಣಗಳ ದಾಳಿಯಿಂದ ನಮ್ಮ ಕುಟುಂಬಸ್ಥರ ನೆಮ್ಮದಿ ಹಾಳಾಗಿದ್ದು, ಸಿಲಿಂಡರ್ ಸೋರಿಕೆಯಾಗಿ ಏನಾದರೂ ಅನಾಹುತ ಆಗುವ ಮುನ್ನ ಪೊಲೀಸರು ಪರಿಹಾರ ಕೊಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಆಧರಿಸಿ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಹೆಗ್ಗಣವಿರುವ ಮನೆಯ ಮಾಲೀಕರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು, ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.