ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳ ಮೇಲೆ ಸುತ್ತಿಗೆಯಿಂದ ತಲೆ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಸುಳ್ಳ ಗ್ರಾಮದ ಪಕ್ಕೀರಪ್ಪ ನೀಲಪ್ಪ ಮಾದರ(32) ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಘಟನೆಯಲ್ಲಿ ಗಾಯಗೊಂಡಿದ್ದ ಶ್ರೇಯಸ್ ಉರ್ಫ ಮೈಲಾರಪ್ಪ ಮಾದರ(7) ಬೆಳಿಗ್ಗೆ ಸಾವನ್ನಪ್ಪಿದ್ದು, ಸಂಜೆ ವೇಳೆಗೆ ಚಿಕಿತ್ಸೆ ಫಲಿಸದೆ ಶ್ರಾವಣಿ ಮಾದರ(8), ಸೃಷ್ಟಿ ಮಾದರ(3) ಮೃತಪಟ್ಟರು. ಪತ್ನಿ ಮುದುಕವ್ವ ಮಾದರ(30) ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಬುಧವಾರ ಬೆಳಗಿನ ಜಾವ ಫಕ್ಕೀರಪ್ಪ ಕುಡಿದ ನಶೆಯಲ್ಲಿ ಟಿವಿ ಸೌಂಡ್ ಇಟ್ಟು ಮುದುಕವ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಎಚ್ಚರಗೊಂಡ ಮಕ್ಕಳು ಕಿರುಚಾಟ ನಡೆಸಿದಾಗ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾನೆ. ನಂತರ ಆತಂಕಗೊಂಡ ಆರೋಪಿತ ಫಕ್ಕೀರಪ್ಪ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಿರುಚಾಟ ಹಾಗೂ ಟಿವಿ ಸೌಂಡ್ ಜೋರಾಗಿ ಇರುವುದರಿಂದ ಸುತ್ತಮುತ್ತಲಿನ ಜನ ಎದ್ದು ಬಂದು ನೋಡಿದ್ದಾರೆ. ಗಾಯಗೊಂಡ ಮುದುಕವ್ವ ಮತ್ತು ಮೂವರು ಮಕ್ಕಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಮೊದಲು ಶ್ರೇಯಸ್ ಸಾವನ್ನಪ್ಪಿದ್ದು, ನಂತರ ಇಬ್ಬರು ಮಕ್ಕಳೂ ಸಾವನ್ನಪ್ಪಿದ್ದಾರೆ. ಘಟನೆಯಿಂದ ಸುಳ್ಳ ಗ್ರಾಮಸ್ಥರು ದಿಗ್ಭ್ರಾಂತರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.