“ಹುಲಿಯುಗುರು” ಎಂಬ ಸದಾರಮೆ ನಾಟಕ

Advertisement

ಬೆಂಗಳೂರು: “ಹುಲಿಯುಗುರು” ಎಂಬ ಸದಾರಮೆ ನಾಟಕ ಆಡುತ್ತಿರುವುದು ಸ್ಪಷ್ಟ ಎಂದು ಕರ್ನಾಟಕ ಬಿಜೆಪಿಯ ನಾಯಕ ಸಿ. ಟಿ. ರವಿ ಹುಲಿ ಉಗುರಿನ ಪೆಂಡೆಂಟ್ ವಿಚಾರ ಮುಂದಿಟ್ಟುಕೊಂಡು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ‘ರಾಜ್ಯದ ಜನರ ದಾರಿತಪ್ಪಿಸಲು ಹುಲಿಯ ಉಗುರಿನ ನಾಟಕ’ ಮಾಡುತ್ತಿದೆ ಎಂದು ದೂರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.
“ರಾಜ್ಯದ ಜನರ ದಾರಿತಪ್ಪಿಸಲು ಹುಲಿಯ ಉಗುರಿನ ನಾಟಕ”
ಇತ್ತೀಚಿಗೆ ನಡೆದ ಐಟಿ ದಾಳಿ, ಅಲ್ಲಿ ಪತ್ತೆಯಾದ ನೂರು ಕೋಟಿಗೂ ಅಧಿಕ ಅಕ್ರಮ ಹಣದ ಕುರಿತಾದ ಚರ್ಚೆಯನ್ನು ದಾರಿತಪ್ಪಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಮಿಷನ್ ಕಲೆಕ್ಟರ್ (CM) ಮತ್ತು ಡೆಪ್ಯೂಟಿ ಕಮಿಷನ್ ಕಲೆಕ್ಟರ್ (DCM) ಆರಂಭಿಸಿರುವ ಹೊಸ ನಾಟಕ “ಹುಲಿ ಉಗುರು”.
ನೂರಾರು ವರ್ಷಗಳಿಂದ ಹುಲಿಯುಗುರನ್ನು ಬಹಳ ಜನ ರಾಜ್ಯದಾದ್ಯಂತ (ದೇಶದಾದ್ಯಂತ) ಆಭರಣವಾಗಿ ಧರಿಸುತಿದ್ದದ್ದು ಹೊಸದೂ ಅಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಣದೆ ಇದ್ದದ್ದೂ ಅಲ್ಲ. ಈಗ ಸರ್ಕಾರದ ಆಡಳಿತಾತ್ಮಕ ವೈಫಲ್ಯ, ಬೋಗಸ್ ಭರವಸೆಗಳ ಮೇಲಿನ ಜನರ ಆಕ್ರೋಶ, ರೈತರಿಗೆ ವಿದ್ಯುತ್ ಪೂರೈಸಲಾಗದೆ ನೀಡಿದ ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯ, ನಿಮ್ಮ ಸರಕಾರದ ಮಂತ್ರಿಗಳು ತೆರೆದ ನಕಲಿ ದಾಖಲೆಗಳ ಇಲಾಖೆ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಪಂಚ ರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆಯ ಪಾಲಾಗಿ ಜನರ ಎದುರು ತಲೆಯೆತ್ತಿ ನಡೆಯಲಾಗದು ಎನ್ನುವ ಕಾರಣಕ್ಕೆ “ಹುಲಿಯುಗುರು” ಎಂಬ ಸದಾರಮೆ ನಾಟಕ ಆಡುತ್ತಿರುವುದು ಸ್ಪಷ್ಟ.
ಒಮ್ಮೆ ನಿಮ್ಮ ಮಂತ್ರಿಮಂಡಲದ ಒಳಗೆ ಇಣುಕಿ ಅಲ್ಲಿ ಬಹಳಷ್ಟು ಜನ ಕಾಡು ಪ್ರಾಣಿಗಳನ್ನು ಬಂಧನದಲ್ಲಿರಿಸಿದವರು, ಕಾಡುಪ್ರಾಣಿಗಳನ್ನು ಹತ್ಯೆ ಮಾಡಿದವರು ಸಿಕ್ಕಿಯಾರು. ಅಂತವರನ್ನು ಬಿಟ್ಟು ಹುಲಿಯುಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳಲು ಹೊರಟಿರುವುದು, ಅದರಲ್ಲೂ ಜನಸಾಮಾನ್ಯರಿಗೆ ನೇರ FSL ವರದಿ ಬರುವುದಕ್ಕೆ ಮುಂಚೆಯೇ ಬಂಧನ , ಇನ್ನು ಸೆಲೆಬ್ರಿಟಿಗಳಿಗೆ ನೋಟಿಸ್ ಇದೆಲ್ಲವೂ ಈ ನಾಟಕದ ಭಾಗವಲ್ಲವೇ?ಇದು ನಿಮ್ಮ ಸರಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ? ಎಂದಿದ್ದಾರೆ.