ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ಹೊಸ ಟರ್ಮಿನಲ್‌ನೊಂದಿಗೆ ಇನ್ನೂ ಒಂದು ಹಂತ ಮೇಲ್ದರ್ಜೆಗೆ ಏರಲಿದೆ. ೩೪೦ ಕೋಟಿ ರೂಪಾಯಿ ಮೊತ್ತದ ಅತ್ಯಾಧುನಿಕ ನೂತನ ಟರ್ಮಿನಲ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಉತ್ತರ ಪ್ರದೇಶದ ಆಝಂಗಡ್‌ನಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ನಂತರ, ವರ್ಚುವಲ್ ಮೂಲಕ ಹುಬ್ಬಳ್ಳಿ ಟರ್ಮಿನಲ್ ಕಾಮಗಾರಿಗೆ ಚಾಲನೆ ನೀಡಿದರು. ಇದಲ್ಲದೇ ಒಟ್ಟು ೯,೮೦೦ ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಒಟ್ಟು ಹದಿನೈದು ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಯಕ್ರಮದ ನೇರಪ್ರಸಾರಕ್ಕೆ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
`ಒಟ್ಟು ೧೯,೬೦೦ ಚದರ ಅಡಿ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ ಸಿದ್ಧವಾಗಲಿದೆ. ಇದು ಈಗಿರುವ ಟರ್ಮಿನಲ್‌ಗಿಂತ ಐದು ಪಟ್ಟು ದೊಡ್ಡದಾಗಿದ್ದು, ವಾರ್ಷಿಕ ೩೫ ಲಕ್ಷ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ’ ಎಂದು ಸಚಿವ ಜೋಶಿ ವಿವರಿಸಿದರು.