ಹುಬ್ಬಳ್ಳಿಯಲ್ಲಿ 6 ರಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರಚಾರ

Advertisement

ಹುಬ್ಬಳ್ಳಿ : ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರು ಪ್ರಚಾರ ನಡೆಸಿದ್ದು, ಇದೇ 6 ರಂದು ಸೋನಿಯಾ ಗಾಂಧಿ ಅವರು ಹುಬ್ಬಳ್ಳಿಯಲ್ಲಿ ಚುನಾವಣೆ ಪ್ರಚಾರ ಮೊಳಗಿಸಲಿದ್ದಾರೆ.
ಪೂರ್ವ ಕ್ಷೇತ್ರ ವ್ಯಾಪ್ತಿಯ ನಗರದ ಮಂಟೂರ ರಸ್ತೆಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಗದೀಶ ಶೆಟ್ಟರ ಅವರ ಕ್ಷೇತ್ರದಿಂದಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಹಳೆಯನ್ಬು ಸೋನಿಯಾ ಗಾಂಧಿ ಮೊಳಗಿಸುತ್ತಿರುವುದು ವಿಶೇಷ.
ಬಿಜೆಪಿಯ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಡಿಯೂರಪ್ಪ, ಜೆ.ಪಿ ನಡ್ಡಾ , ಸ್ಮೃತಿ ಇರಾನಿ ಅವರು ನಗರದಲ್ಲಿ ಪ್ರಚಾರ ಸಭೆ , ಮುಖಂಡರ ಸಭೆ ನಡೆಸಿ ಶೆಟ್ಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಶೆಟ್ಟರ ಗೆಲ್ಲಬಾರದು ಎಂದು ಫರ್ಮಾನು ಹೊರಡಿಸಿದ್ದರು.
ಈ ನಾಯಕರ ಹೇಳಿಕೆ ಬೆನ್ನಲ್ಲೇ ಬಡಪಾಯಿ ಶೆಟ್ಟರ ಮೇಲೇಕೆ ಬಿಜೆಪಿ ನಾಯಕರ ಕಣ್ಣು ಎಂದು ಶೆಟ್ಟರ್ ಮೆದುವಾಗಿಯೇ ಹೇಳಿಕೆ ನೀಡುವ ಮೂಲಕ ಶೆಟ್ಟರ ಸಾಮರ್ಥ್ಯಕ್ಕೆ ಬಿಜೆಪಿ ನಾಯಕರ ಪಡೆ ನಿದ್ದೆಗೆಟ್ಟಿದ್ದನ್ನು ತಮ್ಮದೇ ದಾಟಿಯಲ್ಲಿ ಲೇವಡಿ ಮಾಡಿದ್ದರು. ಇದರ ಬೆನ್ನಲ್ಲಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಂದು ಮುಖಂಡರ ಸಭೆ, ಪತ್ರಿಕಾಗೋಷ್ಠಿ ನಡೆಸಿ ಶೆಟ್ಟರ ಬೆನ್ನಿಗೆ ತಾವಿದ್ದೇವೆ ಎಂದು ಗುಟುರು ಹಾಕಿದ್ದರು. ಈಗ ಸೋನಿಯಾ ಗಾಂಧಿ ಅವರು ಪ್ರಚಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತಷ್ಟು ಜಿದ್ದಾಜಿದ್ದಿಗೆ ದಾರಿಯಾಗಿದೆ. ಸೋನಿಯಾ ಆಗಮನ ಹಿನ್ನೆಲೆಯಲ್ಲಿ ಸಿದ್ದತೆಗಳಲ್ಲಿ ಕಾಂಗ್ರೆಸ್ ನಾಯಕರು ತೊಡಗಿದ್ದಾರೆ.