ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಪ್ರತಿಭಟನೆ: ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ

Advertisement

ಹುಬ್ಬಳ್ಳಿ: ಆಟೋ ಚಾಲಕರ ಬೇಡಿಕೆಗಳ ಕುರಿತು ನೇರವಾಗಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರು ಹಾಗೂ ಮಾಲೀಕರು ಹು-ಧಾ ದಲ್ಲಿ ಆಟೋ ಸಂಚಾರ ಬಂದ್ ಮಾಡಿ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿ, ಆಟೋ ಚಾಲಕರ ಸಂಕಷ್ಟ ಆಲಿಸಿ ನಂತರ ಮಾತನಾಡಿದ ಅವರು, ಸಾರಿಗೆ ಸಚಿವರ ಸಭೆಯಲ್ಲಿ ಯಾವ ತೀರ್ಮಾನವಾಗಿತ್ತೇ ಕಾದು ನೋಡಬೇಕು. ಸರ್ಕಾರದ ಪ್ರತಿನಿಧಿಯಾಗಿ ನಾನು ಮನವಿ ಸ್ವೀಕರಿಸಿದ್ದೇನೆ. ಆಟೋ ಚಾಲಕರ ಬೇಡಿಕೆಗಳ ಕುರಿತಂತೆ ಮುಂದಿನ ತೀರ್ಮಾನವನ್ನು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತಗೆದುಕೊಳ್ಳಲಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸರ್ಕಾರ ಕೂಡಲೇ ಆಟೋ ಚಾಲಕರ ಬೇಡಿಕೆ ಈಡೇರಿಸಬೇಕು: ಶಕ್ತಿ ಯೋಜನೆಯಿಂದಾಗಿ ನಾವು ಜೀವನ ‌ನಡೆಸುವುದು ಕಷ್ಟಕರವಾಗಿದ್ದು, ಈ ನಿಟ್ಟಿನಲ್ಲಿ ನಗರ ಪ್ರದೇಶದ ೨೦ ಕಿಲೋ ಮೀಟರ್ ಒಳಗೆ ಶಕ್ತಿ ಯೋಜನೆಗೆ ಅವಕಾಶ ನೀಡಬಾರದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಆಗ್ರಹಿಸಿದರು. ಇನ್ನೂ ಎಲ್ಲಾ ಆಟೋ ಚಾಲಕರಿಗೆ ಕಾರ್ಮಿಕರ ಕಾರ್ಡ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು


೨೫ ಸಾವಿರಕ್ಕೂ ಆಟೋಗಳ ಸಂಚಾರ ಸ್ಥಗಿತ
ಶಕ್ತಿ ಯೋಜನೆಗೆ ವಿರೋಧಿಸಿ ಹು-ಧಾ ಅವಳಿನಗರದಲ್ಲಿ ೨೫ ಸಾವಿರಕ್ಕೂ ಹೆಚ್ಚು ಆಟೋ ಸಂಚಾರ ಸ್ಥಗಿತಗೊಳಿಸಿ,ನಗರದ ಚೆನ್ನಮ್ಮ ವೃತ್ತದಲ್ಲಿ ನೂರಾರು ಆಟೋ ಚಾಲಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆಟೋ ಚಾಲಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಪಟ್ಟು ಹಿಡಿದರು