`ಹಿರೇಮದ್ದು’ ಔಷಧಿ ಸಸ್ಯ ಅಶ್ವಗಂಧ

Advertisement

ರಾಘವೇಂದ್ರ ಕುಲಕರ್ಣಿ
ಹಿರಿಯರಿಂದ “ಹಿರೇಮದ್ದು” ಎಂದೇ ಕರೆಸಿಕೊಳ್ಳುವ ಔಷಧಿ ಸಸ್ಯ ಅಶ್ವಗಂಧ ಬೆಳೆಯಲು ಆಗಸ್ಟ್ ತಿಂಗಳು ಸೂಕ್ತ ಕಾಲವಾಗಿದೆ.
ವಾಜೀಗಂಧಾ, ಹಯಗಂಧ, ವರಾಹಕರ್ಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಅಶ್ವಗಂಧ ಔಷಧೀಯ ಗುಣವುಳ್ಳ ಸಸ್ಯವಾಗಿದೆ. ನರ, ಕಫ, ವಾತ ಸಂಬಂಧಿ ದೋಷಗಳನ್ನು ಗುಣಪಡಿಸಬಲ್ಲದು. ಜೊತೆಗೆ ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಭುತ ಸಾಮರ್ಥ್ಯವಿದೆ. ಹಾವು, ಚೇಳು ಕಡಿದಾಗ ನಿಂಬೆ ಹಣ್ಣಿನ ರಸದೊಂದಿಗೆ ಈ ಸಸ್ಯದ ಬೇರನ್ನು ಹಚ್ಚಲು ಉಪಯೋಗಿಸುತ್ತಾರೆ ಎಂದು ಹೇಳಲಾಗುತ್ತದೆ.

ಬಿತ್ತನೆ ವಿಧಾನ
ಬಿತ್ತನೆ ಮಾಡಲು ಪ್ರತಿ ಎಕರೆ ಜಮೀನಿಗೆ ಅಶ್ವಗಂಧ ಬೀಜ ೫ ಕೆ.ಜಿ, ಕೊಟ್ಟಿಗೆ ಗೊಬ್ಬರ ೨ ಟನ್ ಹಾಗೂ ರಸಾಯನಿಕ ಗೊಬ್ಬರಗಳಾದ ರಂಜಕ ೮ ಕೆ.ಜಿ ಮತ್ತು ಪೋಟ್ಯಾಕ್ಸ್ ೨೫ ಕೆಜಿ ಅವಶ್ಯಕತೆಯಿದೆ ಎಂಬುವದು ತೋಟಗಾರಿಕೆ ಅಧಿಕಾರಿಗಳ ಸಲಹೆಯಾಗಿದೆ.
ಬಿತ್ತನೆಯ ಮೊದಲು ಪ್ರತಿ ಕಿ.ಗ್ರಾಂ ಬೀಜವನ್ನು ೩೦ ಗ್ರಾಂ ಮ್ಯಾಂಕೋಜೇಬ್‌ನಿಂದ ಉಪಚರಿಸಬೇಕು. ಬೀಜಗಳನ್ನು ನೇರವಾಗಿ ಚೆಲ್ಲಿ ಅಥವಾ ಸಾಲಿನಲ್ಲಿ ಬಿತ್ತನೆ ಮಾಡಬಹುದು. ಇದು ಮಳೆಯಾಧಾರಿತ ಬೆಳೆಯಾದ್ದರಿಂದ ಬಿತ್ತನೆಯು ಮಳೆಯನ್ನು ಅವಲಂಬಿಸಿರುತ್ತದೆ. ಮಳೆ ಬಿದ್ದ ನಂತರ ಭೂಮಿಯನ್ನು ಹದಮಾಡಿ, ಕೊಟ್ಟಗೆ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ ೩೦ ಸೆ.ಮಿ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು. ನಂತರ ಗಿಡದಿಂದ ಗಿಡಕ್ಕೆ ೧೦ ಸೆಂ.ಮೀ. ಅಂತರ ಕಾಪಾಡಿಕೊಳ್ಳುವದು ಮುಖ್ಯವಾಗಿದೆ.

ಆಗಸ್ಟ್ ತಿಂಗಳಲ್ಲಿ ಬಿತ್ತನೆಯಾದರೆ ಕೊಯ್ಲು ಜನವರಿ ತಿಂಗಳಿಂದ ಪ್ರಾರಂಭವಾಗಿ ಮಾರ್ಚ ತಿಂಗಳವರೆಗೂ ಮುಂದುವರೆಯುತ್ತದೆ. ಬಿತ್ತನೆ ಮಾಡಿ ೧೫೦-೧೭೦ ದಿನಗಳ ನಂತರ ಬೆಳೆಯು ಕೊಯ್ಲಿಗೆ ಬಂದಿರುವದನ್ನು ಎಲೆ ಮತ್ತು ಹಣ್ಣುಗಳು ಒಣಗಿರುವದನ್ನು ಗಮನಿಸಿ ನಿರ್ಧರಿಸಬಹುದು.
ಗಿಡವನ್ನು ಬೇರು ಸಮೇತ ಕಿತ್ತು ಬೇರು ಮತ್ತು ಹಣ್ಣುಗಳನ್ನು ಬೇರ್ಪಡಿಸಿ ಒಣಗಿಸಬೇಕು. ಪ್ರತಿ ಹೆಕ್ಟೇರ್‌ನಿಂದ ಸರಾಸರಿ ೪೦೦-೫೦೦ ಕಿ.ಗ್ರಾಂ ಬೇರು ಹಾಗೂ ೫೦ ಕಿ.ಗ್ರಾಂ ಬೀಜದ ಇಳುವರಿಯನ್ನು ನಿರೀಕ್ಷಿಸಬಹುದು. ಬೀಜಕ್ಕಾಗಿ ಹಣ್ಣುಗಳನ್ನು ಒಣಗಿಸುವವರು ಹೆಚ್ಚಿನ ಸಮಯ ಕಾಯಬೇಕು.

ಮಣ್ಣಿನ ರಸಸಾರ ೭.೫-೮ ಇರುವ ಗೋದಿ ಅಥವಾ ಕಂಪು ಮಣ್ಣಿನಲ್ಲಿ ಬಿತ್ತನೆ ಮಾಡುವದು ಸೂಕ್ತ. ಈ ಬೆಳೆಯನ್ನು ಅಂತರ ಬೆಳೆಯಾಗಿ ತೊಗರಿಯಲ್ಲಿ ಬಿತ್ತನೆ ಮಾಡಬಹುದು. ಅಶ್ವಗಂಧ ರೈತರಿಗೆ ಲಾಭದಾಯಕ ಬೆಳೆಯಾಗಿದೆ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ರೈತರು ಈ ಬೆಳೆಯನ್ನು ಬೆಳೆಯಬಹುದು.

ಸುರೇಶ ಕುಂಬಾರ,

ಸಹಾಯಕ ಹಿರಿಯ ನಿರ್ದೇಶಕರು ತೋಟಗಾರಿಕೆ ಇಲಾಖೆ ಶಿರಹಟ್ಟಿ