ಧಾರವಾಡ: ಹಿರಿಯ ಕಲಾವಿದ, ಲೇಖಕ, ನಿರ್ದೇಶಕ ಸುರೇಶ ಕುಲಕರ್ಣಿ(74) ನಿಧನರಾದರು.
ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬುಧವಾರ ಮುಂಜಾನೆ ಕೊನೆಯುಸಿರೆಳೆದರು. ವಾಣಿಜ್ಯ ಪದವೀಧರರಾಗಿದ್ದ ಸುರೇಶ ಕುಲಕರ್ಣಿ ಅವಿವಾಹಿತರಾಗಿದ್ದು, ತಮ್ಮನ್ನು ರಂಗಭೂಮಿ ಹಾಗೂ ಸಿನೆಮಾಕ್ಕೆ ಸಮರ್ಪಿಸಿಕೊಂಡಿದ್ದರು. ಕಲಾವಿದರು ಹಾಗೂ ಕಲಾಸಕ್ತರ ವಲಯದಲ್ಲಿ ಸುಕು ಎಂದೇ ಕರೆಸಿಕೊಳ್ಳುತ್ತಿದ್ದ ಸುರೇಶ ಕುಲಕರ್ಣಿ ರಂಗನಟರಷ್ಟೇ ಅಲ್ಲ, ಕಿರುತೆರೆಯ, ಹಿರಿತೆರೆಯ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.
ಗಿರೀಶ ಕಾರ್ನಾಡ್‌ರ ಒಡನಾಡಿ ಆಗಿದ್ದ ಅವರು ಆಕಾಶವಾಣಿಯಲ್ಲಿಯೂ ರಂಗಭೂಮಿ ಬೆಳೆಸುವ ಕೆಲಸ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಸಂದರ್ಶನದ ಮೂಲಕ ಶ್ರೋತೃಗಳಿಗೆ ರಂಗಭೂಮಿ ಸಾಧಕರನ್ನು ಪರಿಚಯಿಸುವ ಮಹತ್ಕಾರ್ಯ ಮಾಡಿದ್ದಾರೆ. ಆಕಾಶವಾಣಿಗೆ ನಾಟಕಗಳನ್ನು ನಿರ್ದೇಶನ ಮಾಡಿ ರಂಗ ಪ್ರತಿಭೆ ಮೆರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ರಂಗನಟರು, ಚಿತ್ರನಟರ ಕುರಿತು ನುಡಿಚಿತ್ರಗಳನ್ನು ಬರೆದಿದ್ದಾರೆ.
ಗಿರೀಶ ಕಾರ್ನಾಡ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಸುರೇಶ ಕುಲಕರ್ಣಿ ಅವರು ರವಿ ಬೆಳಗೆರೆ ಹಾಗೂ ಶಂಕರ ನಾಗ್ ಅವರಿಗೂ ಆತ್ಮೀಯರಾಗಿದ್ದರು.