ಹಿಂದೂ ಮಹಾಸಭಾದಿಂದ ಜನವರಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Advertisement

ಮಂಗಳೂರು: ಮುಂದಿನ ವರ್ಷದ ಜನವರಿಯಲ್ಲಿ ಬೆಂಗಳೂರಿನಲ್ಲಿ ಹಿಂದೂ ಮಹಾಸಭಾದ ಪುನಃಶ್ಚೇತನ ಸಂಕಲ್ಪ ಶಿಬಿರ ಆಯೋಜಿಸಲಾಗಿದ್ದು, ಡಾ.ಸುಬ್ರಹ್ಮಣ್ಯಂ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀ ರಾಜೇಶ್ ಪವಿತ್ರನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯದ 83 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಇರಾದೆ ಇದೆ ಎಂದರು.
ಕಾರ್ಕಳದಲ್ಲಿ ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್ ಸ್ಪರ್ಧೆಗೆ ಹಿಂದೂ ಮಹಾಸಭಾ ಬೆಂಬಲ‌ ನೀಡುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪವಿತ್ರನ್, ಈ ಬಗ್ಗೆ ಕಾರ್ಯಕಾರಿಣಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದರು. ಆದಾಗ್ಯೂ ಮುತಾಲಿಕ್ ಬೆಂಬಲ ಕೋರಿದರೆ ಆ ಕುರಿತು ಪರಿಶೀಲಿಸಬಹುದು ಎಂದರು.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷ ಸ್ಪರ್ಧೆ ಮಾಡಲಿದೆ. ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಂಬಂಧಪಟ್ಟವರೂ ನಮ್ಮ ಸಂಪರ್ಕದಲ್ಲಿದ್ದಾರೆ. ಸಮಾನ ಮನಸ್ಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದೂ ಅವರು ತಿಳಿಸಿದರು.
‘ಕೇಸರಿ ಒಕ್ಕೂಟ’ ಸ್ಥಾಪಿಸುವ ಬಗ್ಗೆ ಹಿಂದೆ ಚಿಂತನೆ ನಡೆದಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಈಗ ರೈತ ಸಂಘಟನೆಗಳು ಕೂಡಾ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಲು ಮುಂದೆ ಬಂದಿವೆ ಎಂದವರು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಬಿ.ಜೆ.ಪಿ. ಚುನಾವಣಾ ಸಂದರ್ಭದಲ್ಲಿ ಧಾರ್ಮಿಕ ವಿಷಯಗಳನ್ನು ಎತ್ತಿ ಹಾಕುತ್ತದೆ. ದತ್ತ ಪೀಠಕ್ಕೆ ತಾತ್ಕಾಲಿಕ ಅರ್ಚಕರನ್ನು ನೇಮಿಸಿದೆ. ಕಾಯಂ ಅರ್ಚಕರನ್ನು ಯಾಕೆ ನೇಮಕ ಮಾಡಿಲ್ಲ ಎಂದೂ ಪವಿತ್ರನ್ ಪ್ರಶ್ನಿಸಿದರು.
ಹಿಂದೂ ಮಹಾಸಭಾದ ನಾಯಕರ ವಿರುದ್ಧ ಆಡಳಿತಾರೂಢ ಬಿಜೆಪಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಬಿಗಿ ಸೆಕ್ಷನ್‌ಗಳನ್ನು ಅಳವಡಿಸಿ ಜೈಲಿಗೆ ತಳ್ಳುತ್ತಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಪವಿತ್ರನ್, ತಮ್ಮನ್ನು ಬಂಧಿಸಿದ ಕ್ರಮಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ ಎಂದರು. ತಮ್ಮದು ಮೂಲ ಹಿಂದೂ ಮಹಾಸಭಾ ಈ ಬಗ್ಗೆ ಆರೋಪ ಮಾಡುತ್ತಿರುವವರು ಬೇರೆ ಪಕ್ಷದವರ ಚಿತಾವಣೆಗೆ ಒಳಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದರು. ದಕ್ಷಿಣ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಸುಳ್ಯ ಮತ್ತು ಮುಲ್ಕಿ-ಮೂಡಬಿದ್ರೆ ಕ್ಷೇತ್ರಗಳಿಗೆ ಶೀಘ್ರವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ರಾಜೇಶ್ ಪೂಜಾರಿ, ಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.