ಹಿಂದೂ ಎಂದಿಗೂ ಕಾಫಿರ್ ಆಗಲು ಸಾಧ್ಯವೇ ಇಲ್ಲ

ಗುರುಬೋಧೆ
Advertisement

ಹಿಂದೂ ಎಂದಿಗೂ ಕಾಫಿರ್ ಆಗಲು ಸಾಧ್ಯವೇ ಇಲ್ಲ. ಕಾಫೀರ್ ಎಂಬ ಶಬ್ದಕ್ಕೆ ಅನರ್ಥ ಕಲ್ಪಿಸಿ ಅಂತಃಕಲಹ ಹುಟ್ಟಿಸುವುದನ್ನೆ ಹುನ್ನಾರ ಮಾಡಿಕೊಳ್ಳುವ ಹಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಒಂದು ಧರ್ಮದ ತತ್ವ ಸಿದ್ಧಾಂತಗಳು ಅದೇ ಧರ್ಮಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇಸ್ಲಾಂ ಧರ್ಮದಲ್ಲಿ ಕಾಫಿರ್ ಎಂದರೆ ಅಲ್ಲಾಹ್‌ನು ಕಳಿಸಿದ ಸಂದೇಶವಾಹಕ.
ಎಂದರೆ ಪೈಗಂಬರ್‌ರ ಆದೇಶ ಯಾರು ಧಿಕ್ಕರಿಸುತ್ತಾರೋ ಅವರು ಇಸ್ಲಾಂ ಧರ್ಮದಲ್ಲಿ ಕಾಫೀರ್‌ರು. ಈ ಮಾತು ಕೇವಲ ಇಸ್ಲಾಂ ಧರ್ಮದಲ್ಲಿ ಹುಟ್ಟಿ ಅದನ್ನು ಪಾಲಿಸದೆ ಇರುವ ವ್ಯಕ್ತಿಗೆ ಅನ್ವಯವಾಗುತ್ತದೆ. ಕಾಫಿರ್ ಎನ್ನುವ ಶಬ್ದ ಕೇವಲ ಮುಸಲ್ಮಾನರಿಗೆ ಸಂಬಂಧ ಪಟ್ಟಿದೆ. ಅದು ಆ ಧರ್ಮದ ಮಾರ್ಗವನ್ನು ತೋರಿಸುತ್ತದೆ. ಭಗವಂತನನ್ನು ಕಾಣಬೇಕಾದರೆ ದಾರಿಗಳು ಹಲವಾರು ಇವೆ. ರೂಪ ನಾಮಗಳೂ ಕೂಡ ಅನೇಕ.
ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳು ಆಯಾ ಸಮುದಾಯಕ್ಕೆ ಶ್ರೇಷ್ಠವಾದುಗಳೇ ಆಗಿವೆ. ಸಣ್ಣ-ದೊಡ್ಡ ಧರ್ಮ ಎಂತೇನೂ ಇಲ್ಲ. ಹಜರತ್ ಹುಸೇನ್‌ರಿಗೆ ಉಪದೇಶ ಮಾಡಿದ್ದು ಹಿಂದುಗಳಲ್ಲ. ಅವರು ನಮಾಜ ಮಾಡುತ್ತಿದ್ದರು ಆದರೆ ಪೈಗಂಬರರ ತತ್ವ ಸಿದ್ಧಾಂತ ಧಿಕ್ಕರಿಸಿದ ಕಾರಣ ಅವರಿಗೆ ಕಾಫಿರ್ ಎಂದು ಕರೆದರು. ಇಸ್ಲಾಂ ಧರ್ಮ, ಶಾಂತಿ ಸಹನೆ, ಭಾತೃತ್ವ ಸಿದ್ಧಾಂತ ಮೂಲಕ ಬೆಳೆದು ಬಂದಿದೆ.
ಒಂದು ಮುಪ್ಪಾದ ಮುದುಕಿ ಒಂದು ಗಂಟು ಹೊತ್ತುಕೊಂಡು ಹೋಗಲು ಗಂಟು ಎತ್ತಲು ಪ್ರಯತ್ನಿಸಿದಳು. ಆದರೆ ಎತ್ತಲಾಗದೆ ಕಾರಣ ಅಲ್ಲೇ ನಿಂತಳು. ಹಜರತ್ ಮಹ್ಮದ ಪೈಗಂಬರರು ಅದೇ ಮಾರ್ಗವಾಗಿ ಹೋಗುತ್ತಿದ್ದರು. ಆ ಮುದುಕಿಯನ್ನು ಕಂಡು ಎಲ್ಲಿಗೆ ಹೋಗಬೇಕು. ನಾನು ಆ ಗಂಟು ಹೊತ್ತುಕೊಂಡು ಹೋಗುತ್ತೇನೆ ಬಾ ಎಂದು ಆ ಗಂಟು ಹೊತ್ತು ಪೈಗಂಬರರು ಮುನ್ನಡೆದರು.
ಮುದುಕಿ ಹಿಂದೆ ಬೆನ್ನತ್ತಿ ನಡೆದಳು. ಆಗ ಮುದುಕಿ ಹೇಳುತ್ತ ಇಲ್ಲೊಬ್ಬ ಮಹ್ಮದ ಎಂಬ ಕೆಟ್ಟ ವ್ಯಕ್ತಿ ಇದ್ದಾನೆ. ಅವನ ಹತ್ತಿರಕ್ಕೆ ಹೋಗಬೇಡ. ನೀನು ಒಳ್ಳೆಯವನಿದ್ದ ಹಾಗೆ ಕಾಣುತ್ತಿ. ಅವನ ಸಹವಾಸ ಮಾಡಬೇಡ ಎಂದು ಪೈಗಂಬರರಿಗೆ ಅನೇಕ ವಿಧವಾಗಿ ಬೈಯ್ಯುತ್ತಾಳೆ. ಮನೆ ಬಂದ ತಕ್ಷಣ ಗಂಟು ಇಳಿಸಿ ಹೋಗುವಾಗ ಮುದುಕಿ ಕೇಳುತ್ತಾಳೆ. ಸಹಾಯಕಳಾಗಿ ನಿಂತಿದ್ದ ನನ್ನ ಗಂಟು ಹೊತ್ತುಕೊಂಡು ಮನೆಗೆ ಬಂದು ಉಪಕಾರ ಮಾಡಿದ್ದಿ. ನಿನ್ನ ಹೆಸರೇನು ಎಂದು ಕೇಳಲೇ ಇಲ್ಲ. ನಿನ್ನ ಹೆಸರೇನು ಎಂದಳು. ಅಮ್ಮಾ ದಾರಿಯುದ್ದಕ್ಕೂ ನೀನು ಬಯ್ಯುತ್ತ ಬಂದ ಆ ವ್ಯಕ್ತಿಯೇ ನಾನು.
ನಾನು ಮಹ್ಮದ ಪೈಗಂಬರ್ ಅಂತಾ ಹೇಳಿದ. ತಕ್ಷಣ ಆ ಮುದುಕಿ ಪೈಗಂಬರ್ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾಳೆ ಇಂತ ಸದ್ಗುಣಿಗೆ ನಾನು ಏನೇನೋ ತಿಳಿಯದೇ ಬೈದೆನಲ್ಲ, ಎಂದು ಪಶ್ಚಾತ್ತಾಪ ಪಡುತ್ತಾಳೆ. ಇಂಥ ಅಪ್ರತಿಮವಾದ ನಡೆಯಿಂದಲೇ ಇಸ್ಲಾಂ ಧರ್ಮ ಬೆಳೆದು ಬಂದಿದೆ. ಯಾರೇ ಆಗಲಿ ತನ್ನ ಧರ್ಮ ಹೊಗಳಿಕೊಂಡು ಮತ್ತೊಂದು ಧರ್ಮವನ್ನು ತೆಗಳಿದರೆ ಆತನೇ ಸಮಾಜದ ದೃಷ್ಟಿಯಲ್ಲಿ ಧರ್ಮದ್ರೋಹಿಯಾಗುತ್ತಾನೆ.

ಗುರುಬೋಧೆ