ಹಾಸ್ಟೆಲ್‌ಗೆ ಬೀಗ: ಮೂವರ ಅಮಾನತು

ಅಮಾನತು
Advertisement

ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳು ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳದೆ ಬೀಗ ಹಾಕಿದ ಮೂವರನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಾಳ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯದ ದಿನಗೂಲಿ ಅಡುಗೆ ಸಹಾಯಕ ರಾಜು, ಅಡುಗೆಯವರಾದ ವೆಂಕಟೇಶ್, ಹನುಮಂತಪ್ಪ ಅಮಾನತುಗೊಂಡವರು.
ಮಾರ್ಚ್ 31ರಂದು ರಾತ್ರಿ 7.15ರ ಸುಮಾರಿಗೆ ಜಿಪಂ ಸಿಇಒ ಎಂ.ಎಸ್.ದಿವಾಕರ್ ಹಾಸ್ಟೆಲ್‌ಗೆ ಭೇಟಿ ನೀಡಿದ್ದು, ಆ ವೇಳೆಯಲ್ಲಿ ಹಾಸ್ಟೆಲ್‌ಗೆ ಬೀಗ ಹಾಕಲಾಗಿತ್ತು. ಮಕ್ಕಳು ಸಹ ಇರಲಿಲ್ಲ. ಈ ಬಗ್ಗೆ ದಿವಾಕರ್ ಅವರು ವರದಿ ನೀಡುವಂತೆ ನೋಟಿಸ್ ನೀಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಾತಾವರಣ ನಿರ್ಮಾಣ ಮಾಡದೆ ಬೀಗ ಹಾಕಿಕೊಂಡು ಹೋಗಿರುವುದು ಕರ್ತವ್ಯ ಲೋಪ ಎಂದು ಪರಿಗಣಿಸಿ ಮೂವರನ್ನು ಅಮಾನತುಗೊಳಿಸಲಾಗಿದೆ. ವಾರ್ಡನ್ ಕೆ.ಶ್ರೀಕಾಂತ್ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಅವರಿಗೆ ಉಪನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಎಂದು ಉಪನಿರ್ದೇಶಕ ಜಗದೀಶ್ ಹೆಬ್ಬಾಳ್ ತಿಳಿಸಿದ್ದಾರೆ.‌