ಹಾವೇರಿ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬುಧವಾರ ತಡರಾತ್ರಿ ಬಿಡುಗಡೆಯಾಗಿದ್ದು, ಹಾವೇರಿ ಮೀಸಲು ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಆಯ್ಕೆಯಾಗಿದ್ದರೆ, ಹಾಲಿ ಶಾಸಕ ನೆಹರು ಓಲೇಕಾರ ಅವರಿಗೆ ಟಿಕೆಟ್ ಕೈತಪ್ಪಿದೆ.
ಹಾವೇರಿ ಮೀಸಲು ಕ್ಷೇತ್ರಕ್ಕೆ ಎಸ್ಸಿ ಎಡಗೈ ಸಮುದಾಯದ ಗವಿಸಿದ್ದಪ್ಪ ದ್ಯಾಮಣ್ಣನವರ ಮತ್ತು ಹಾನಗಲ್ ಕ್ಷೇತ್ರಕ್ಕೆ ಶಿವರಾಜ ಸಜ್ಜನರ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.
ಸಂಘ ಪರಿಹಾರ ಹಿನ್ನೆಲೆ ಹೊಂದಿರುವ ಬ್ಯಾಡಗಿ ಗ್ರೇಡ್–2 ತಹಸೀಲ್ದಾರ್ ಆಗಿದ್ದ ಗವಿಸಿದ್ದಪ್ಪ ಅವರು ತಮ್ಮ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಟೆಕೆಟ್ ಆಕಾಂಕ್ಷಿಯಾಗಿದ್ದರು. ಇವರು 2018ರ ಚುನಾವಣೆಯಲ್ಲೂ ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಈ ಬಾರಿ ಪಕ್ಷದ ಟಿಕೆಟ್ ಸಿಕ್ಕಿದೆ.
ಹಾನಗಲ್ ಕ್ಷೇತ್ರದಲ್ಲಿ 2021ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ವಿರುದ್ಧ ಸೋಲು ಅನುಭವಿಸಿದ್ದ ಶಿವರಾಜ ಸಜ್ಜನರ ಅವರಿಗೆ ಈ ಬಾರಿ ಮತ್ತೆ ಟಿಕೆಟ್ ನೀಡಲಾಗಿದೆ. ಸೋತ ನಂತರವೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಕೊಂಡು ಗಮನ ಸೆಳೆದಿದ್ದರು.
ಓಲೇಕಾರಗೆ ಕೈ ತಪ್ಪಿದ ಟಿಕೆಟ್…
ನಗರಸಭೆಗೆ ಮಂಜೂರಾದ ಒಂದು ಕೋಟಿ ರೂಪಾಯಿ ಅನುದಾನ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ನೆಹರು ಓಲೇಕಾರ ಮತ್ತು ಅವರ ಇಬ್ಬರು ಪುತ್ರರನ್ನು ಜನಪ್ರತಿನಿಧಿಗಳ ನ್ಯಾಯಾಲಯ ಈಚೆಗೆ ದೋಷಿ ಎಂದು ತೀರ್ಮಾನಿಸಿ ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಶಿಕ್ಷೆ 3 ವರ್ಷಗಳಿಗಿಂತ ಕಡಿಮೆ ಇರುವ ಕಾರಣ ಇದೇ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಿತ್ತು.
ನೆಹರು ಅವರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಅಡ್ಡಿ–ಆತಂಕ ದೂರವಾಗಿದೆ ಎಂದು ನಿರಾಳವಾಗಿದ್ದರು. ಆದರೆ, ಬಿಜೆಪಿ ಟಿಕೆಟ್ ಕೈತಪ್ಪಿರುವ ಕಾರಣ ತೀವ್ರ ನಿರಾಸೆಯಾಗಿದೆ. ಮುಂದೆ ಏನು ನಿರ್ಧಾರ ಮಾಡುತ್ತಾರೋ ಕಾಯ್ದು ನೋಡಬೇಕಿದೆ.