ಹಸಿವು, ಬಡತನ, ನಿರುದ್ಯೋಗಗಳ ತಾಪ ನಾಡಿನ ಜನರಿಗೆ ತಟ್ಟದಿರಲಿ

ಸಿದ್ದರಾಮಯ್ಯ
Advertisement

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ನಾವು ನಾಡಿನ ಜನತೆಗೆ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳಿಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಮೂಲಕ “ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ” ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು ಬೆಲೆಯೇರಿಕೆ, ನಿರುದ್ಯೋಗ, ಹಸಿವು, ಬಡತನಗಳಿಂದ ನೊಂದು ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರ ಬದುಕಿಗೆ ನಮ್ಮ ಈ ಗ್ಯಾರೆಂಟಿ ಯೋಜನೆಗಳು ಹೊಸ ಚೈತನ್ಯ ತುಂಬಲಿದೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ಜನರ ಬೆವರ ಗಳಿಕೆಯ ಹಣ ಜನಕಲ್ಯಾಣ ಕಾರ್ಯಗಳಿಗೆ ಮಾತ್ರ ಬಳಕೆಯಾಗಲಿ, ಹಸಿವು, ಬಡತನ, ನಿರುದ್ಯೋಗಗಳ ತಾಪ ನಾಡಿನ ಜನರಿಗೆ ತಟ್ಟದಿರಲಿ ಎಂಬುದು ನಮ್ಮ ಸದುದ್ದೇಶ. ನಮ್ಮ ಈ 5 ಗ್ಯಾರೆಂಟಿಗಳನ್ನು ನಾಡಿನ ಜನತೆಗೆ ಅತ್ಯಂತ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಪಂಚ ಗ್ಯಾರಂಟಿಗಳ ಅನುಷ್ಟಾನ ಕುರಿತು ಟ್ವೀಟ್‌ ಮಾಡಿರುವ ಅವರು ಪ್ರತಿ ಗ್ಯಾರಂಟಿಯ ವಿಶ್ಲೇಷಣೆ ಮಾಡಿದ್ದಾರೆ

ಗೃಹಜ್ಯೋತಿ: ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತಿ ಮನೆಗೆ ಗರಿಷ್ಠ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ.
ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು. ಜುಲೈ 1ರ ವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಬಳಕೆದಾರರು ಕಟ್ಟಬೇಕಿದ್ದು, ಆಗಸ್ಟ್ ತಿಂಗಳಿನಿಂದ ಯೋಜನೆಯ ಲಾಭ ಪಡೆಯಬಹುದಾಗಿದೆ. ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದಿದ್ದಾರೆ.

ಅನ್ನಭಾಗ್ಯ: ಬಡತನ ರೇಖೆಗಿಂತ ಕೆಳಗಿನ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ ತಲಾ 10 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ.
ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ಹಿಂದಿನ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ ಸದ್ಯ 5 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ, ಅದನ್ನು 10 ಕೆ.ಜಿ ಗೆ ಏರಿಸಲಾಗಿದೆ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ನಾಡಿನ ಬಡಕುಟುಂಬಗಳ ಹಸಿವನ್ನು ನೀಗಿಸಿ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ನಾವು ಬದ್ಧ ಎಂದಿದ್ದಾರೆ.

ಗೃಹಲಕ್ಷ್ಮಿ: ಯಾವುದೇ ಜಾತಿ, ಧರ್ಮ, ಭಾಷೆ, ವರ್ಗಗಳ ಆಧಾರದ ಮೇಲೆ ತಾರತಮ್ಯವಿಲ್ಲದೆ ನಾಡಿನ ಪ್ರತಿ ಮನೆಯ ಯಜಮಾನಿಗೆ ಮಾಸಿಕ ರೂ. 2,000 ವನ್ನು ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ.
ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅರ್ಜಿಗಳ ಪರಿಶೀಲನೆ ಹಾಗೂ ತಂತ್ರಾಂಶ ಅಭಿವೃದ್ಧಿಪಡಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು.ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಗೆ ಆರ್ಥಿಕ ನೆರವು ನೀಡಿ, ಅವರ ಕಷ್ಟಗಳಿಗೆ ಹೆಗಲಾಗಿ ನಿಲ್ಲಲು ನಾವು ಬದ್ಧರಿದ್ದೇವೆ ಎಂದಿದ್ದಾರೆ.

ಶಕ್ತಿ: ಶಾಲಾ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಎಸಿ, ಸ್ಲೀಪರ್ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಲು ಇಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ.
ಜೂನ್ 11 ರಂದು ಈ ಯೋಜನೆಗೆ ಚಾಲನೆ ನೀಡಲಿದ್ದು, ಶೇ. 94 ರಷ್ಟು ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆಯಲಿದ್ದಾರೆ. ಪುರುಷ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಅವರಿಗಾಗಿ ಮೀಸಲಿಡಲಾಗುತ್ತದೆ. ಶಿಕ್ಷಣ, ಉದ್ಯೋಗ, ಇನ್ನಿತರೆ ಕೆಲಸ ಕಾರ್ಯಗಳು ಸೇರಿದಂತೆ ವಿವಿಧ ಜವಾಬ್ದಾರಿಗಳ ನಿರ್ವಹಣೆಗಾಗಿ ನಿತ್ಯ ಪ್ರಯಾಣ ಕೈಗೊಳ್ಳುವ ನಾಡಿನ ಮಹಿಳೆಯರ ಹಿತ ಕಾಪಾಡಲು ನಾವು ಬದ್ಧರಿದ್ದೇವೆ ಎಂದಿದ್ದಾರೆ.

ಯುವನಿಧಿ: 2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ವಿಧದ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ.
ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ನಮ್ಮ ಈ ಯೋಜನೆಯ ಉದ್ದೇಶ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಯೋಜನೆಯ ಲಾಭ ಪಡೆಯಬಹುದಾಗಿದೆ. ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊಂದಿದ್ದು, ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ನಾಡಿನ ಯುವಶಕ್ತಿಗೆ ಆರ್ಥಿಕ ನೆರವು ನೀಡಿ ಅವರ ಭವಿಷ್ಯದ ಕನಸಿಗೆ ಬೆಂಬಲವಾಗಿ ನಿಲ್ಲಲು ನಾವು ಬದ್ಧರಿದ್ದೇವೆ ಎಂದಿದ್ದಾರೆ.