ರಮೇಶ ಅಳವಂಡಿ
ಹುಬ್ಬಳ್ಳಿ:
ಹಸಿರು ಸಂಚಾರ ಪಥ ಯೋಜನೆ'(ಗ್ರೀನ್ ಮೊಬಿಲಿಟಿ ಕಾರಿಡಾರ್ ಪ್ರಾಜೆಕ್ಟ್) ಇದು ಇಲ್ಲಿನ ಉಣಕಲ್ ಕೆರೆಯ ಪಕ್ಕದಲ್ಲಿರುವ ಉಣಕಲ್ ನಾಲಾವನ್ನು ಪುನರುಜ್ಜೀವನಗೊಳಿಸಿ ಆ ನಾಲಾದ ಒಂದು ಅಂಚಿನಲ್ಲಿ ನಡೆದಾಡಲು ಮತ್ತು ಸೈಕಲ್ ಓಡಿಸಲು (ವಾಕಿಂಗ್ ಮತ್ತು ಸೈಕ್ಲಿಂಗ್) ಪಥ ನಿರ್ಮಾಣ ಮಾಡುವುದು, ಪಥದ ಪಕ್ಕ ಹಚ್ಚಹಸಿರಿನ ಹುಲ್ಲು ಹಾಸು, ಸದಾ ಹಸಿರಿನಿಂದ ಕಂಗೊಳಿಸುವ ಗಿಡಗಳು, ಹೂಗಿಡಗಳನ್ನು ಬೆಳೆಸಿ ಆಹ್ಲಾದಕರ ಅನುಭವ ಸಾರ್ವಜನಿಕರಿಗೆ ಕಲ್ಪಿಸುವ ವಿಭಿನ್ನ ಮತ್ತು ಮಹತ್ವಾಕಾಂಕ್ಷಿ ಯೋಜನೆ.
ಉಣಕಲ್ ಕೆರೆ ಅಂಚಿನಲ್ಲಿರುವ ಉಣಕಲ್ ನಾಲಾದಿಂದ ಆರಂಭವಾಗುವ ಈ ಯೋಜನೆ ವ್ಯಾಪ್ತಿಯಲ್ಲಿ ಶಿರೂರ ಪಾರ್ಕ್, ಗೋಕುಲ ರಸ್ತೆ, ಹುಬ್ಬಳ್ಳಿ-ಕಾರವಾರ ರಸ್ತೆವರೆಗೂ ಹೊಂದಿದೆ. ಅಲ್ಲಿಯವರೆಗೂ ನಾಲಾ ಇದ್ದು, ಒಟ್ಟು 130 ಕೋಟಿ ರೂ. ಮೊತ್ತದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆ ಅನುಷ್ಠಾನ ಮಾಡುತ್ತಿದೆ. ಯೋಜನೆ ಕಾಮಗಾರಿ ನಾಲಾ ಉದ್ದಕ್ಕೂ ನಡೆಯುತ್ತಿದೆ.
ಈಗಾಗಲೇ ನಾಲಾ ಆರಂಭಿಕ ಹಂತದಿಂದ ೫೦೦ ಮೀಟರ್‌ನಷ್ಟು(ನಾಲಾ ಆರಂಭಿಕ ಹಂತದಿಂದ ಹನುಮಂತನಗರ ಸೇತುವೆವರೆಗೆ) ಕಾಮಗಾರಿ ಪೂರ್ಣಗೊಂಡಿದೆ. ಕೆಲ ತಿಂಗಳ ಹಿಂದೆ ಉದ್ಘಾಟನೆಗೊಂಡು ಈಗ ಅಲ್ಲಿ ಪೇ ಅಂಡ್ ಯೂಸ್ ಸೈಕಲ್‌ಗಳನ್ನು ತೆಗೆದುಕೊಂಡು ಜನರು ಸೈಕ್ಲಿಂಗ್ ಮಾಡುತ್ತಿದ್ದಾರೆ. ಜನರು ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಾಕ್ ಮಾಡುತ್ತಾರೆ.
ಉದ್ಘಾಟನೆಗೊಂಡು ಒಂದೆರಡು ತಿಂಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಈ ಹಸಿರು ಪಥ ಈಗ ಒಣಗಿ ನಿಂತಿದೆ! ಹಸಿರು ಪಥ ಉದ್ಘಾಟನೆ ವೇಳೆ ಇದ್ದ ಆರಂಭದ ಉತ್ಸಾಹ ಮಾಯವಾಗಿ ಉಪೇಕ್ಷೆ ಆವರಿಸಿದೆ. ಈ ನಿರ್ಲಕ್ಷö್ಯದಿಂದ ಹಸಿರು ಪಥ ಎಂಬ ಅರ್ಥವನ್ನೇ ಕಳೆದುಕೊಳ್ಳುವ ಸ್ಥಿತಿ ಬಂದಿದೆ.
ಯಾಕೆಂದರೆ ಇಲ್ಲಿ ನಳನಳಿಸುತ್ತಿದ್ದ ಹಚ್ಚ ಹಸಿರಿನ ಗಿಡಗಳು ಈಗ ಒಣಗಿ ನಿಂತಿವೆ. ಅಷ್ಟೇ ಅಲ್ಲ ಪಥದ ಎಡಬದಿ ಹಚ್ಚ ಹಸಿರಿನಿಂದ ಕೂಡಿದ್ದ ಲಾನ್ ಒಣಗಿ ನಿಂತಿದೆ. ಒಣಗಿದ ಎಲೆಗಳು ಬಿದ್ದು ಬಣಗುಡುತ್ತಿದೆ.
ಟ್ಯಾಪ್, ಸ್ಪಿಂಕ್ಲರ್ ಇದ್ದರೂ ನೀರು ಬಿಡುವವರಿಲ್ಲ!
ಲಾನ್ ಗ್ರಾಸ್, ಗಿಡಗಳಿಗೆ ಯತೇಚ್ಛ ನೀರು ಪೂರೈಕೆಗೆ ೫೦೦ ಮೀಟರ್ ಹಸಿರು ಪಥದ ಉದ್ದಕ್ಕೂ ಪೈಪ್ ಹಾಕಿ ವಾಲ್ವ್ ಅಳವಡಿಸಿ ಟ್ಯಾಪ್ ಹಾಕಲಾಗಿದೆ. ನೀರು ಪೂರೈಕೆ ಇದ್ದರೂ ಟ್ಯಾಪ್ ಆನ್ ಮಾಡಿ ಹಚ್ಚಹಸಿರಿನಿಂದ ಕಂಗೊಳಿಸುವಂತೆ ನೋಡಿಕೊಳ್ಳುವವರಿಲ್ಲ. ಆರಂಭದ ೫೦೦ ಮೀಟರ್ ಹಸಿರು ಪಥದ ಸ್ಥಿತಿಯೇ ಹೀಗಾದರೆ ಇನ್ನೂ ೪-೫ ಕಿ.ಮೀ ಗೂ ಅಧಿಕ ಹಸಿರು ಪಥ ನಿರ್ಮಾಣ ಆಗುತ್ತದೆ. ಅದರ ನಿರ್ವಹಣೆ ಹೇಗೆ? ಎಂದು ಜನರು ಪ್ರಶ್ನಿಸುವಂತಾಗಿದೆ. ನಿರ್ವಹಣಾ ಲೋಪದಿಂದ ಮಹತ್ವಾಕಾಂಕ್ಷಿ ಯೋಜನೆ ಮುಗ್ಗರಿಸುವ ಸ್ಥಿತಿ ಬಂದಿದೆ.
ಯೋಜನೆ ಉದ್ದೇಶವೇನು?
ಉಣಕಲ್ ಕೆರೆಯ ಹೊರಹರಿವಿನಿಂದ ಆರಂಭವಾಗುವ ಯೋಜನೆಯು ನಾಲಾದಲ್ಲಿ ಮಳೆ ನೀರಿನೊಂದಿಗೆ ಹಸಿ ಕೊಳಚೆ ನೀರು ಮಿಶ್ರಣವಾಗುವುದನ್ನು ತಡೆಯಲು ಪ್ರತ್ಯೇಕ ಯುಜಿಡಿ ಲೈನ್ ಹಾಕಲಾಗುತ್ತಿದೆ. ಪ್ರತಿ ಉಪನಾಲಾ ಒಳಹರಿವಿನಲ್ಲಿ ಒಳಚರಂಡಿ ಸಂಸ್ಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಪರಿಣಾಮಕಾರಿ ಪ್ರವಾಹ ಎದುರಿಸಲು ಗೇಬಿಯನ್ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸೈಕಲ್ ಪಥದ ಜೊತೆಗೆ ನಾಲಾ ಪಕ್ಕದಲ್ಲಿರುವ ಈಗಿರುವ ಉದ್ಯಾನವನ ಜೊತೆಗೆ ಮನೋರಂಜನಾ ವಲಯಗಳಾಗಿ ಪರಿವರ್ತಿಸುವ ಪರಿಸರ ಸ್ನೇಹಿ ಸಾರ್ವಜನಿಕ ಉಪಯುಕ್ತ ಸ್ಥಳವಾಗಿ ರೂಪಿಸುವುದು ಯೋಜನೆ ಉದ್ದೇಶವಾಗಿದೆ.
ಬಿಸಿಲು ಹೆಚ್ಚಾಗಿದ್ದರಿಂದ ಲಾನ್ ಒಣಗಿದೆ
ಇದು ಪೈಲೆಟ್ ಯೋಜನೆಯಾಗಿದ್ದು, ಒಂದು ಬದಿ ಲಾನ್ ಮಾಡಲಾಗಿದೆ. ಇದರ ನಿರ್ವಹಣೆಗೆ ಜಿಲ್ಲಾಧಿಕಾರಿಯವರ ನೇತೃತ್ವದ ಸಮಿತಿ ಇದೆ. ನಿರ್ವಹಣೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಲಾನ್ ಮೇಲ್ಭಾಗ ಕಟಾವು ಮಾಡಲಾಗಿದೆ. ಬಿಸಿಲು ಪ್ರಮಾಣ ಹೆಚ್ಚಾಗಿ ಒಣಗಿದೆ. ಒಣಗಿದ ಹುಲ್ಲು ತೆರವುಗೊಳಿಸಿ ಮತ್ತೊಮ್ಮೆ ಬೆಳೆಸಿ ನಿರ್ವಹಣೆ ಮಾಡಲು ಯೋಜನೆ ರೂಪಿಸಿದ್ದೇವೆ.
– ಚನ್ನಬಸಪ್ಪ ಡಿ, ಉಪ ಪ್ರಧಾನ ವ್ಯವಸ್ಥಾಪಕರು, ಸ್ಮಾರ್ಟ್ ಸಿಟಿ ಲಿಮಿಟೆಡ್, ಹುಬ್ಬಳ್ಳಿ.