ಕೊಪ್ಪಳ: ಏಕಾಏಕಿಯಾಗಿ ಕಿನ್ನಾಳ ಜಲಾಶಯದಿಂದ ಹಿರೇಹಳ್ಳಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೋಳೂರು ಬಳಿ ಶುಕ್ರವಾರ ಮೋಟಾರು ತರಲು ಹೋಗಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಲಾಯಿತು.ಕೋಳೂರು ಗ್ರಾಮದ ಮಹಾಂತೇಶ ಡೊಳ್ಳಿನ್, ರಮೇಶ್ ಡೊಳ್ಳಿನ್, ಬಸಚರಾಜ್, ಬಸವರಾಜ್ ಹುಯಿಲಗೋಳ, ಕೆಂಚಪ್ಪ ಕುರುಬರ ಹಳ್ಳದಲ್ಲಿ ಸಿಲುಕಿದ್ದರು.ಏಳು ಜನರು ಮೋಟಾರುಗಳನ್ನು ತೆಗೆದುಕೊಂಡು ಬರಲು ತೆರಳಿದ್ದರು. ಇಬ್ಬರು ರೈತರು ನೀರು ಬರುವುದನ್ನು ಗಮನಿಸಿ, ವಾಪಸ್ ಬಂದರು. ಇತರಿಗೂ ಹೇಳಿದರು. ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ಐವರು ರೈತರು ತಮ್ಮ ಕೆಲಸ ಮುಂದುವರೆಸಿದರು.ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ವಿಠ್ಠಲ ಚೌಗಲಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಐವರು ರೈತರನ್ನು ರಕ್ಷಣೆ ಮಾಡಿದರು.