ಹಲಾಲ್ ಗುರುತು ಇರುವ ವಸ್ತು ಖರೀದಿ ಬೇಡ: ಮುತಾಲಿಕ್

ಮುತಾಲಿಕ್
Advertisement

ಹುಬ್ಬಳ್ಳಿ: ಹಲಾಲ್ ಮುಕ್ತ ದೀಪಾವಳಿ ಆಚರಿಸುವ ನಿಟ್ಟಿನಲ್ಲಿ ಹಿಂದೂಗಳು ಹಲಾಲ್ ಗುರುತು ಇರುವ ಯಾವುದೇ ವಸ್ತುಗಳನ್ನು ಖರೀದಿಸಬಾರದು. ಜೊತೆಗೆ ಮುಸ್ಲಿಂ ವ್ಯಾಪಾರಸ್ಥರಿಂದಲೂ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ವ್ಯಾಪಾರಸ್ಥರಿಂದ ಹಬ್ಬದ ಸಾಮಗ್ರಿಗಳನ್ನು ಖರೀದಿಸಿದರೆ ಅದು ಅಶಾಸ್ತ್ರೋಕ್ತವಾಗುತ್ತದೆ. ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ಅದು ವಿರೋಧ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅವರಿಂದ ಕಬ್ಬು, ಹೂವು, ಹಣ್ಣು, ಬಾಳೆ ಗಿಡ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಬಾರದು. ಹಿಂದೂ ವ್ಯಾಪಾರಸ್ಥರಿಂದಲೇ ಖರೀದಿಸಿ ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಬೇಕು. ಇದು ನಮ್ಮ ಮನವಿಯೂ ಹೌದು, ಆಗ್ರಹವೂ ಹೌದು ಎಂದರು.
ಹಲಾಲ್ ಉತ್ಪನ್ನದಿಂದ ಬರುವ ಆದಾಯ ಜಗತ್ತಿನಲ್ಲಿಯೇ ಆತಂಕ ಸೃಷ್ಟಿಸಿದೆ. ಒಂದು ಉತ್ಪನ್ನಕ್ಕೆ ಹಲಾಲ್ ಪ್ರಮಾಣ ಪತ್ರ ಪಡೆಯಲು ವರ್ಷಕ್ಕೆ ೫೦ ಸಾವಿರ ನೀಡಬೇಕು. ಇದರಿಂದ ಆರ್ಥಿಕವಾಗಿ ಅವರು ಬಲಿಷ್ಠವಾಗುತ್ತಿದ್ದು, ಆ ಹಣವನ್ನು ಭಯೋತ್ಪಾದನೆಗೆ ಹಾಗೂ ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.