ಗೋಕಾಕ: ಸ್ವಾತಂತ್ರ‍್ಯ ಹೋರಾಟದಲ್ಲಿ ಕಾಂಗ್ರೆಸ್ ಬಹುಮುಖ್ಯಪಾತ್ರ ವಹಿಸಿದ್ದು ಈಗ ಬಿಜೆಪಿಯವರು ಮನೆ-ಮನೆಗೆ ಧ್ವಜ ಹಾಕುವ ಮೂಲಕ ನಮ್ಮದೇ ಮುಖ್ಯ ಪಾತ್ರವಿದೆ ಎಂದು ಪೋಸ್ ಕೊಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಗೋಕಾಕನಲ್ಲಿ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರ್ ಘರ್ ತಿರಂಗಾ ಎಂದು ಬಿಜೆಪಿ ದಾಳ ಉರುಳಿಸಿದೆ. ಹಣ ನಮ್ಮದು, ಧ್ವಜ ನಮ್ಮದು ಮತದಾರರನ್ನು ತನ್ನತ್ತ ಸೆಳೆಯುವ ತಂತ್ರ ಹೆಣೆದು ವಾತಾವರಣ ಸೃಷ್ಟಿ ಮಾಡಿದೆ. ಅದಕ್ಕಾಗಿ ಕಾಂಗ್ರೆಸ್‌ನಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ೭೫ ಕಿಮೀ ಪಾದಯಾತ್ರೆ ಅಭಿಯಾನ ಮಾಡಲಾಗುತ್ತಿದೆ. ಸರ್ಕಾರದಿಂದ ಹಣ ಭರಿಸಿ ಮನೆ-ಮನೆಗೆ ಧ್ವಜ ನೀಡಬೇಕಿತ್ತು ಎಂದು ಕಿಡಿಕಾರಿದರು.
ಬಿಜೆಪಿ ಕೊಡುಗೆ ಶೂನ್ಯ:
ಬೆಂಗಳೂರಿನಲ್ಲಿ ೭೫ನೇ ಸ್ವಾತಂತ್ರ‍್ಯೋತ್ಸವದ ನಿಮಿತ್ತ, ದೇಶಭಕ್ತಿಯಿಂದ ಶಕ್ತಿ ಪ್ರದರ್ಶನ ಮಾಡೋದರಲ್ಲಿ ತಪ್ಪೇನಿದೆ. ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿದ್ದು ಕಾಂಗ್ರೆಸ್‌ನಿಂದ, ನಾವು ಹಿಂದೆ ಸರಿದರೇ ಬಿಜೆಪಿಯವರು ಹೈಜಾಕ್ ಮಾಡುತ್ತಾರೆ ಎಂದರು.
ಶಾಶ್ವತ ಪರಿಹಾರಕ್ಕೆ ಚಿಂತನೆ:
ನಿರಂತರ ಮಳೆಯಿಂದ ಗೋಕಾಕ ಜನತೆ ಸಂಕಷ್ಟಕ್ಕೆ ಸಿಲುಕ್ಕಿದ್ದು ಅವರ ಸಮಸ್ಯೆ ಆಲಿಸಲು ಬಂದಿರುವೇ. ಈ ಸಮಸ್ಯೆಯನ್ನು ಜಿಲ್ಲಾಡಳಿತ, ನಗರ ಸಭೆ ಖುದ್ದಾಗಿ ಪರಿಶೀಲನೆ ಮಾಡಿ ನಿವಾರಣೆ ಮಾಡುವ ಅಗತ್ಯವಿದೆ. ಇಲ್ಲಿನ ತೊಂದರೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕ್ಷೇತ್ರಕ್ಕೆ ಸೀಮಿತವಾಗದೇ ಜಿಲ್ಲೆಯಲ್ಲಿರುವ ಸಮಸ್ಯೆ ಆಲಿಸಲು ಸದಾಕಾಲವೂ ನಿರತರಾಗಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.