ಬಾಗಲಕೋಟೆ : ಹರ್‌ಘರ್ ತಿರಂಗಾ ಪ್ರಧಾನಮಂತ್ರಿಗಳ ಕರೆಗೆ ಬಾಗಲಕೋಟೆ ಧ್ವನಿಯಾಗಿದೆ. ಬಹುತೇಕ ಮನೆಗಳು, ಅಂಗಡಿ, ಬ್ಯಾಂಕ್, ಸಂಘ ಸಂಸ್ಥೆಗ ಮೇಲೆ ೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಮುನ್ನುಡಿ ಬರದಿದೆ. ಎಲ್ಲ ಕಟ್ಟಡಗಳ ಮೇಲೆ ಧ್ವಜ ಹಾರಾಡುತ್ತಿವೆ.
ಅಮೃತ ಮಹೋತ್ಸವದ ಸಂಭ್ರಮದ ನಿಮಿತ್ಯ ಬೃಹತ್ ಮೆರವಣಿಗೆಗಳು ನಡೆದಿದ್ದು ದಿ.೧೫ರಂದು ಉತ್ಸವದ ಆಚರಣೆಗೆ ಸಿದ್ದತೆ ನಡೆದಿದೆ. ವಿದ್ಯಾಗಿರಿಯಲ್ಲಿ ಭಾರತೀಯ ಜನತಾ ಪಾರ್ಟಿ, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ೫೦೦ ಮೀಟರ ಉದ್ದದ ಧ್ವಜ ಮೆರವಣಿಗೆ ಸಂಭ್ರಮ ತಂದಿತು.
ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಮೆರವಣಿಗೆಗೆ ಚಾಲನೆ ನೀಡಿ ಧ್ವಜ ಹೊತ್ತು ಹೆಜ್ಜೆ ಹಾಕಿದರು. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಅನೇಕ ಮಾಜಿ ಯೋಧರು, ಪಕ್ಷದ ಕಾರ್ಯಕರ್ತರು, ನಗರಸಭೆ ಸದಸ್ಯರು ಭಾಗವಹಿಸಿದ್ದು ಭಾರತ ಮಾತಾಕೀ ಜೈ… ಘೋಷಣೆಗಳು ವಿಜೃಂಭಿಸಿದವು.
ಸುಮಾರು ೨ ಗಂಟೆಗಳ ಕಾಲ ವಿದ್ಯಾಗಿರಿಯ ವಿವಿಧ ಭಾಗಗಳಲ್ಲಿ ಸಂಚರಿಸಿ ಸಾರ್ವಜನಿಕ ಸಭೆಯಾಗಿ ಮುಕ್ತಾಯಗೊಂಡಿದ್ದು ವಿಶ್ವದಲ್ಲಿಯೇ ಭಾರತ ಇಂದು ಜಗದ್ಗುರುವಾಗಿದ್ದು ಈ ದೇಶದ ಮಹಿಮೆ ಕಾರಣ ಎಂದು ಬಣ್ಣಿಸಲಾಯಿತು. ವಿದ್ಯಾಗಿರಿ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮನೆ, ಮನೆಗಳ ಮೇಲೆ ಅಂಗಡಿಗಳು, ಬ್ಯಾಂಕ್, ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಗರಿಗೆದರಿ ಹಾರುತ್ತಿರುವ ಚಿತ್ರ ಮೈಮನ ಪುಳಕಿತಗೊಳಿಸಿತು. ಶಾಸಕ ಡಾ. ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ನಗರದ ಗಣ್ಯರು, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮತ್ತಿತರರ ಪ್ರಮುಖರ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮನೆಗಳ ಮೇಲೆ ಈ ಗಣ್ಯರು ಧ್ವಜಾರೋಹಣ ಮಾಡಿದರು.