ಅಭ್ಯರ್ಥಿಗಳು ಮತದಾರರ ಮುಂದೆ ಹೋಗುವುದಕ್ಕಿಂತ ಹೆಚ್ಚು ಗುಡಿ ಗುಂಡಾರ ತಿರುಗಾಡುತ್ತಿದ್ದಾರೆ…. ಸ್ವಾಮೀ ನಮ್ಮಪ್ಪ ಕಾಪಾಡು….. ನಾನು ಗೆಲ್ಲುವ ಹಾಗೆ ಮಾಡು ಎಂದು ಗಲ್ಲ ಗಲ್ಲ ಬಡಿದುಕೊಳ್ಳುತ್ತಿದ್ದಾರೆ. ಆ ಅಭ್ಯರ್ಥಿ ಈ ದೇವಸ್ಥಾನಕ್ಕೆ ಹೋದರೆ, ಇನ್ನೊಬ್ಬ ಅಭ್ಯರ್ಥಿ ಆ ದೇವರನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ. ಹಾಗಾಗಿ ಈಗ ಪೀಕಲಾಟ ಬಂದಿರುವುದು ದೇವರಿಗೆ. ಯಾರಿಗೆ ಸಪೋರ್ಟ್ ಮಾಡಬೇಕು? ನನ್ನ ಕಡೆ ಬಂದ ಅಭ್ಯರ್ಥಿಗೆ ಸಪೋರ್ಟ್ ಮಾಡಿ ಗೆಲ್ಲಿಸಿದರೆ ಆ ದೇವರ ಕಡೆ ಹೋದ ಅಭ್ಯರ್ಥಿ ಸೋಲುತ್ತಾನೆ. ಆಗ ಆ ದೇವರು ನನ್ನ ಮೇಲೆ ಡೌಟ್ ಪಡುತ್ತಾರೆ ಎಂದು ಯೋಚನೆ ಮಾಡುವ ದೇವರಿಗೆ ಈ ಎಲೆಕ್ಷನ್ನು ಯಾಕಾದರೂ ಬರುತ್ತವೆಯೋ ಎಂದು ಅನಿಸಿದೆಯಂತೆ. ಅವತ್ತು ಆ ದುರುಗಮ್ಮ ದೇವಿ ಮತ್ತು ದೇವರು ಎದುರಾಬದುರಾ ಭೇಟಿಯಾದರು. ಈ ಗಂಡ್ ದೇವರು, … ಏನ್ ದುರುಗಮ್ಮ.. ನಿಮ್ ಗುಡಿಗೆ ಆ ಅಭ್ಯರ್ಥಿ ಭಯಂಕರ ಅಡ್ಡಾಡುತ್ತಿದ್ದಾನೆ ಅಂದಾಗ… ದುರುಗಮ್ಮ ದೇವಿ… ಅಲ್ಲ ಅಣ್ಣ ನನ್ನ ಅಭ್ಯರ್ಥಿ ಎದುರಾಳಿ ನಿನ್ನ ಗುಡಿಗೆ ಬರುತ್ತಿದ್ದಾನೆ… ಏನು ನಡೆದಿದೆ? ಎಂದು ಮರುಪ್ರಶ್ನೆ ಮಾಡಿದಳು. ಹೌದಮ್ಮ ಹೌದು… ತಲೆ ತಲಾಂತರದಿಂದ ಅವರ ಮನೆತನದ ಎಲ್ಲರೂ ನನ್ನ ಗುಡಿಗೇ ಬರುತ್ತಿದ್ದಾರೆ. ಈತನೂ ಬಂದಿದ್ದಾನೆ ಅಷ್ಟೇ ಅಂದಾಗ… ಹೌದಪ್ಪ ಹೌದು… ನನ್ನ ಕಡೆ ಬಂದ ಅಭ್ಯರ್ಥಿಯ ಮುತ್ತಾತನ ತಾತನ ಕಾಲದಿಂದ ನನಗೆ ನಡೆದುಕೊಳ್ಳುತ್ತಾರೆ. ಹಬ್ಬ ಹುಣ್ಣಿಮೆ ಬಂದರೆ ಅದೆಂತಹ ಎಡೆಗಳನ್ನು ಇಟ್ಟು ಹೋಗುತ್ತಾರೆ ಗೊತ್ತ? ಇನ್ನು ಉಡುಗೊರೆಯಂತೂ ಕೇಳಲೇಬೇಡ. ಪರಿಸ್ಥಿತಿ ಹೀಗಿರುವಾಗ ನಾನು ನನ್ನ ಅಭ್ಯರ್ಥಿಯನ್ನು ಬಿಟ್ಟುಕೊಡುವುದು ಹೇಗೆ ಎಂದು ದುರುಗಮ್ಮ ದೇವಿ ಎದುರುತ್ತರ ಕೊಟ್ಟಳು. ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಲೇ ಇಲ್ಲ. ಈ ಪೂಜಾರಿಗಳು ಮಾತ್ರ ನಮ್ಮ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ ನಿಜ. ಆದರೆ ಎರಡೂ ಕಡೆ ಜಮಾಯಿಸ್ತಾರೆ. ನೋಡೋಣ ಬಿಡು.. ಮೆಜಾರಿಟಿ ಮೇಲೆ ಲೆಕ್ಕ ಮಾಡೋಣ. ಅಂದ ಹಾಗೆ ಇನ್ನೊಂದು ವಿಷಯ. ಕೆಲವು ಅಭ್ಯರ್ಥಿಗಳು ಎರಡೆರಡು ಗುಡಿಗಳಿಗೆ ಅಡ್ಡಾಡಿ..ನೀನು ನಮ್ಮ ಬಾಸು… ಅವರೂ ನಮ್ಮ ಬಾಸು ಅಂತಿದಾರೆ. ಅಂಥವರದ್ದೇ ದೊಡ್ಡ ಸಮಸ್ಯೆ. ಒಂದು ಕೆಲಸ ಮಾಡೋಣ. ಒಬ್ಬ ಅಭ್ಯರ್ಥಿಗೆ ಒಬ್ಬರೇ ದೇವರು ಎಂಬ ಫಾರ್ಮಾನು ಹೊರಡಿಸಲು ಸಂಜೆ ನಡೆಯುವ ಸಭೆಯಲ್ಲಿ ನಮ್ಮ ವಾದ ಮಂಡಿಸೋಣ. ಅಂದ ಹಾಗೆ ಇಂದಿನಿಂದ ಎಲ್ಲ ಅಭ್ಯರ್ಥಿಗಳ ಮೇಲೆ ಹದ್ದಿನಕಣ್ಣು ಮಡಗಲು ಹೇಳೋಣ. ಅವರು ಎರಡು ಮೂರು ದೇವಸ್ಥಾನಗಳಿಗೆ ಹೋಗಿ.. ನೀವೇ..ನೀವೇ..ನೀವೇ ಅಂತಾರೇನೋ ನೋಡೋಣ. ಆಮೇಲೆ ಯಾರನ್ನು ಆರಿಸಬೇಕು ಎಂದು ಭಕ್ತರ ಕನಸಲ್ಲಿ ಹೋಗಿ ಹೇಳೋಣ.. ಇವರ ಸಲುವಾಗಿ ನಾವ್ಯಾಕೆ ಜಗಳವಾಡಬೇಕು ಅಲ್ಲವೇ ಎಂದು ಆ ಎರಡೂ ದೇವರು ಅಲ್ಲಿಂದ ಹೋದರು.