ಗದಗ: ಜಮೀನು ಮಾರಾಟದಿಂದ ಬಂದ ಹಣ ಹಂಚಿಕೆ ಮಾಡುವ ವಿಚಾರದಲ್ಲಿ ಗೊಂದಲವುಂಟಾಗಿ ತಂದೆಯನ್ನು ಇಬ್ಬರು ಮಕ್ಕಳು ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ಲಕ್ಕುಂಡಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ವಿವೇಕಾನಂದ ಕರಿಯಲ್ಲಪ್ಪನವರ(೫೨) ಮೃತರು. ಮೊದಲ ಹೆಂಡತಿಯ ಮಕ್ಕಳು ತಂದೆಯನ್ನು ಮನೆಯಲ್ಲಿ ಕೂಡಿ ಹಾಕಿ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ವಿವೇಕಾನಂದ ಕರಿಯಲ್ಲಪ್ಪನವರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಪ್ರಕರಣದ ವಿವರ:
ಕೊಲೆಗೀಡಾಗಿರುವ ವಿವೇಕಾನಂದ ಕರಿಯಲ್ಲಪ್ಪನವರ ತಮ್ಮ ೬ ಎಕರೆ ಜಮೀನಿನಲ್ಲಿ ಮೂರು ಎಕರೆ ಮಾರಾಟ ಮಾಡಿದ್ದಾರೆ. ಇದರಿಂದ ಬಂದಿದ್ದ ೧.೩೦ ಲಕ್ಷ ರೂ. ಹಂಚಿಕೆ ವಿಚಾರದಲ್ಲಿ ಮನೆಯಲ್ಲಿ ಜಗಳ ಪ್ರಾರಂಭವಾಗಿದೆ. ಎರಡನೇ ಪತ್ನಿ ರೇಖಾ ಎಂಬುವವರು ಜಮೀನಿಗೆ ತೆರಳಿದಾಗ ಮೊದಲ ಪತ್ನಿ ಕಸ್ತೂರಮ್ಮನ ಪುತ್ರರು ಬಂದು ತಂದೆಯನ್ನ ಕೂಡಿ ಹಾಕಿ ಹಲ್ಲೆ ನಡೆಸಿದ್ದರು ಎಂದು ದೂರು ನೀಡಲಾಗಿದೆ.
ಕೊಲೆಗೆ ಜಮೀನು ಮಾರಾಟದ ಹಣದ ಹಂಚಿಕೆ ವಿಚಾರವೇ ಕಾರಣವೆಂದು ಎರಡನೇ ಪತ್ನಿ ರೇಖಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.