ಹಣ ಪಾವತಿಸಿ ಹಣ ವಾಪಸ್‌ ಪಡೆಯುವುದೇ ಬಿಜೆಪಿ ಸೂತ್ರ

Advertisement

ಕೋಲಾರ: ಕೇವಲ ಒಂದು ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ರಾಜ್ಯ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಹೊಸದಾಗಿ ಹತ್ತು ಸಾವಿರ ಕೋಟಿ‌ಗೂ ಅಧಿಕ ಮೊತ್ತದ ಟೆಂಡರ್‌ ನೀಡುತ್ತಿದೆ. ಮತ್ತೆ ಶೇ 40 ಕಮಿಷನ್‌ ಪಡೆಯಲು ಈ ಕೃತ್ಯಕ್ಕೆ ಮುಂದಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಹಣವನ್ನು ಬಿಜೆಪಿ ಸರ್ಕಾರ ಮತ್ತೆ ಲೂಟಿ ಮಾಡಲು ಕೈ ಹಾಕಿದೆ. ಕಾಂಗ್ರೆಸ್‌ ಸರ್ಕಾರ ಬಂದ ಕೂಡಲೇ ಎಲ್ಲಾ ಟೆಂಡರ್‌ ರದ್ದುಗೊಳಿಸಿ, ತನಿಖೆ ನಡೆಸಲಾಗುವುದು. ತಪ್ಪು ಕಂಡುಬಂದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವರು, ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ಸರ್ಕಾರ ನಿತ್ಯ ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ತೊಡಗಿದೆ ವಿವಿಧ ಕಾಮಗಾರಿ ನಡೆಸಿದ ಸಂಬಂಧ 20 ಸಾವಿರ ಕೋಟಿ ಬಿಲ್‌ ಪಾವತಿಸಿಲ್ಲವೆಂದು ಗುತ್ತಿಗೆದಾರರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಕೇವಲ 30 ದಿನ ಮಾತ್ರ ಈ ಸರ್ಕಾರ ಇರಲಿದ್ದು, ಇದರ ನೂತನ ಸೂತ್ರವೆಂದರೆ ಹಣ ಪಾವತಿಸಿ ಹಣ ವಾಪಸ್‌ ಪಡೆಯುವುದು’ ಎಂದರು.
ಇತ್ತಿಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ವೇದಿಕೆಯಲ್ಲಿ ಯಾವ ಅವಮಾನ ಮಾಡಿದರೆಂದು ತಾವೆಲ್ಲಾ ಗಮನಿಸಿದ್ದೀರಿ. ರಾಜಕೀಯವಾಗಿ ನಾವು ಯಡಿಯೂರಪ್ಪ ಅವರನ್ನು ವಿರೋಧಿಸುತ್ತೇವೆ. ಆದರೆ, ತಂದೆ ವಯಸ್ಸಿನ ಯಡಿಯೂರಪ್ಪ ಅವರನ್ನು ಬಿಜೆಪಿ ನಡೆಸಿಕೊಳ್ಳುವ ರೀತಿಯೇ ಇದು ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ರಾಜ್ಯಕ್ಕೆ ಎಷ್ಟೇ ಬಾರಿ ಬಂದರೂ ನಮಗೆ ತೊಂದರೆ ಇಲ್ಲ. ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದರ ಬಗ್ಗೆ ಜನರಿಗೆ ಉತ್ತರಿಸಬೇಕು. ಪ್ರವಾಹ ಸಂದರ್ಭದಲ್ಲಿ ಅನುದಾನ ನೀಡಲಿಲ್ಲ, ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲುದಾರಿಕೆ ನೀಡಿಲ್ಲ. ಯಾವುದೇ ಹೊಸ ಯೋಜನೆ ಘೋಷಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.