ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಭರವಸೆ

bommai
Advertisement

ವಿಜಯಪುರ(ತಂಗಡಗಿ): ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ವೃತ್ತಿ ಆಧಾರಿತವಾದ ಕುಲಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ನಿಗಮದ ಮುಖಾಂತರ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಿ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಮಾಜದ ನಿಗಮದಲ್ಲಿ ಹಡಪದ ಸಮುದಾಯ ಒಳಗೊಂಡಿಲ್ಲ. ಶಿವಶರಣ ಹಡಪದ ಅಪ್ಪಣ್ಣ ಅವರ ಜನ್ಮಸ್ಥಳ ಮಸಬಿನಾಳ, ಹಡಪದ ಅಪ್ಪಣ್ಣನವರ ಶರಣ ಲಿಂಗಮ್ಮ ತಾಯಿಯವರ ಜನ್ಮಸ್ಥಳ ದೇಗಿನಾಳ ಗ್ರಾಮವನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ತಮ್ಮ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ರೂ. ನೀಡಲಾಗಿತ್ತು. ನನ್ನ ಅವಧಿಯಲ್ಲಿ 3 ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ಹಡಪದ ಸಮಾಜದವರು ಸಂಘಟಿತರಾಗಬೇಕು:
ಹಡಪದ ಸಮಾಜ ಹಿಂದೆ ಸಂಘಟನೆಯಾಗಿರಲಿಲ್ಲ. ಆದರೆ ನಾನು ಮುಖ್ಯಮಂತ್ರಿಯಾದಾಗಲೇ ಈ ಸಮುದಾಯ ಸಂಘಟಿತವಾಗಿರುವುದು ದೈವೇಚ್ಛೆ. 2016ರ ಪೂರ್ವದಲ್ಲಿ ಈ ಸಮುದಾಯ ‘ನಾಯಿಂದ’ ಸಮಾಜದಿಂದ ವಿಂಗಡಿಸಿದ್ದರು. ಆ ಸಂದರ್ಭದಲ್ಲಿಯೇ ನೀವು ಸಂಘಟನೆಯಾಗಬೇಕಿತ್ತು. ಸಾಮಾಜಿಕ ಹಿತಾಸಕ್ತಿಯಿಂದ ಹಡಪದ ಸಮಾಜದವರು ಸಂಘಟಿತರಾಗಲು ಅವಕಾಶ ನೀಡಲಿಲ್ಲ. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿ ಸಿಕ್ಕಿದೆ. ಸಮಾಜದಲ್ಲಿ ಬದಲಾವಣೆ ತರಬೇಕಾದ ಪರವಿರೋಧಗಳು ಬರುವುದು ಸಹಜ. ಈ ವಿರೋಧಗಳನ್ನು ಮೆಟ್ಟಿನಿಂತಾಗ ಮಾತ್ರ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ ಎಂದರು.

bommai