ಸ್ವಾರ್ಥ ಇದ್ದಿದ್ರೆ ನಾನು ಮಂಡ್ಯದಲ್ಲಿ ನಿಲ್ಲಬೇಕಿರಲಿಲ್ಲ: ಸಮಲತಾ

ಸುಮಲತಾ
Advertisement

ಮಂಡ್ಯ: ಸ್ವಾರ್ಥ ಇದ್ದಿದ್ರೆ ನಾನು ಮಂಡ್ಯದಲ್ಲಿ ನಿಲ್ಲಬೇಕಿರಲಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಸ್ವಾರ್ಥ ಇದ್ದಿದ್ರೆ, ಮಗನ ಭವಿಷ್ಯ ಬೇಕು ಎಂದಿದ್ರೆ ಏನು ಬೇಕಾದ್ರು ಮಾಡಬಹುದಿತ್ತು. ಅಂಬರೀಷ್ ಅವರ ದಶಕಗಳ ಜನಸೇವೆಯನ್ನು ಮುಂದುವರಿಸಿಕೊಂಡು ಉದ್ದೇಶದಿಂದಲೇ ನಾನು ರಾಜಕೀಯಕ್ಕೆ ಬಂದಿದ್ದೆ. ಆದರೆ, ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಾನು ರಾಜಕೀಯಕ್ಕೆ ಬರುವುದನ್ನು ತಡೆಯಲು ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ಕೆ.ಆರ್. ನಗರದಲ್ಲಿ, ಪಾಂಡವಪುರದಲ್ಲಿ ಇದ್ದಾಗ ನನ್ನ ಮೇಲೆ ಎರಡು ಬಾರಿ ಹಲ್ಲೆ ಮಾಡಲು ಯತ್ನಿಸಿದರು. ನನ್ನನ್ನು ಹಿಂಸೆ ಮಾಡಿದರು. ಕಟ್ಟಕಡೆಯ ಗ್ರಾಮಗಳಿಗೆ ಹೋದಾಗ ನನಗೆ ಅಲ್ಲಿನ ಜನರು ಹೇಳಿದ್ದರು ಇಂದು ಅಂಬರೀಷ್ ಅವರು ಮಾಡಿದ್ದ ರಸ್ತೆ, ಅಂಬರೀಷ್ ಅವರು ಮಾಡಿಸಿದ ಕೆಲಸ ಎಂದು ಜನರು ತೋರಿಸಿದ್ದಾರೆ. ನಾನು ಅಲ್ಲಿಗೆ ಹೋದಾಗ ಇದೇ ಮೊದಲ ಬಾರಿಗೆ ಎಂಪಿ ಒಬ್ಬರು ನಮ್ಮಲ್ಲಿಗೆ ಬಂದಿದ್ದಾರೆ ಅಂತ ಹರ್ಷ ವ್ಯಕ್ತಪಡಿಸಿದ್ದರು.
ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಾಗ ನಾನು ತಪ್ಪಾಗಿ ಕಂಡೆ. ಕೆಲವರು ನನ್ನ ಮೇಲೆ ಕೆಂಗಣ್ಣು ಬೀರಿದರು. ಅವರ ಭ್ರಷ್ಚಾಚಾರಕ್ಕೆ ನಾನು ಸಾಥ್ ನೀಡಿದ್ದರೆ ನನ್ನನ್ನೂ ಅವರ ಮನೆಯ ಸದಸ್ಯರೆಂದು ಹೇಳುತ್ತಿದ್ದರೋ ಏನೋ. ಆದರೆ, ನನಗೆ ಅವರ ಭ್ರಷ್ಚಾಚಾರ ಒಪ್ಪಿಕೊಳ್ಳುವ ಮನಸ್ಸಿರಲಿಲ್ಲ. ಮೈಶುಗರ್ ಕಾರ್ಖಾನೆಗೆ ಮೂರು ವರ್ಷಗಳ ಹೋರಾಟದಿಂದ 50 ಕೋಟಿ ರೂ. ಅನುದಾನ ತಂದು ಅದನ್ನು ಪುನರ್ ಚಾಲನೆ ಮಾಡಲಾಗಿದೆ. ಒಬ್ಬ ಮಾಜಿ ಸಿಎಂ ಇದ್ದು, ಮೂರು ಜನ ಎಂಎಲ್ ಸಿಗಳಿದ್ದರೂ ಇದು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲಾ ರಾಜಕೀಯ ಇಚ್ಛಾಶಕ್ತಿ ಬೇಕಿತ್ತು. ಇಷ್ಟೆಲ್ಲಾ ಪ್ರಭಾವಿಗಳಾಗಿದ್ದೂ ನೀವು ಮಂಡ್ಯಕ್ಕೆ ಏನು ಮಾಡಿದ್ದೀರಿ?
ಮಂಡ್ಯ ಜನ ಅಂಬರೀಶ್ ಅವರಿಗೆ ಪ್ರೀತಿ ಕೊಟ್ಟರು. ಅವರು ಹೋಗುವಾಗ ಮಹಾರಾಜನ ರೀತಿ ಕಳಿಸಿದ್ರಿ. ಈ ಪ್ರೀತಿಗಾಗಿ ನಾನು ಚುನಾವಣೆಗೆ ನಿಂತೆ. ಮಂಡ್ಯ ಜನ ನನ್ನ ಪರ ನಿಂತರು. ಚಿತ್ರರಂಗ, ಅಂಬರೀಶ್ ಅಭಿಮಾನಿಗಳು, ನನ್ನ ಜನ ಬೆಂಬಲಕ್ಕೆ ನಿಂತರು. ನಾನು ಯಾರು ಅಂಬರೀಶ್ ಯಾರು ಎಂದು ಇಂಡಿಯಾಗೆ ಹಲವು ವರ್ಷದಿಂದ ಗೊತ್ತು. ಈಗ ಅಲ್ಲ ನಾವು ಸಿನಿಮಾದಲ್ಲಿ ಇದ್ದಾಗಿನಿಂದ ನಮ್ಮ ಬ್ಯಾನರ್ ಹಾಕಿದ್ದಾರೆ ಎಂದು ಹೇಳಿದರು.ಜನ ದುಡ್ಡು ಕೊಟ್ಟು ನಮ್ಮ ಸಿನಿಮಾ ನೋಡಿದ್ದಾರೆ. ಅಂಬರೀಶ್ ಅಭಿಮಾನಿಗಳು, ಮಂಡ್ಯ ಜನರಿಗಾಗಿ ಹೋರಾಟ ಮಾಡಿದೆ. ನನಗೆ ಇದ್ಯಾವುದು ಬೇಡ ಎಂದಿದ್ದರೆ ನನಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನಮ್ಮ ಬ್ಯಾನರ್, ಹೋರ್ಡಿಂಗ್ ಚಿಕ್ಕ ವಯಸ್ಸಿನಿಂದ ಹಾಕುತ್ತಿದ್ದಾರೆ. ನಾನ್ಯಾರು ಅಂಬರೀಶ್ ಯಾರು 40 ವರ್ಷದಿಂದ ಗೊತ್ತಿದೆ. ನನಗೆ ಯಾವದನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.