ಕುಷ್ಟಗಿ ತಾಲೂಕಿನ ಎಸ್.ಗಂಗನಾಳ ಗ್ರಾಮದ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನದಿಂದ ತಾವರಗೇರಾವರೆಗೆ ಕಾಂಗ್ರೆಸ್ ವತಿಯಿಂದ ದೇಶದ ಏಕತೆಗಾಗಿ ಸ್ವಾತಂತ್ರ‍್ಯ ನಡಿಗೆ ಜನಜಾಗೃತಿ ಪಾದಯಾತ್ರೆ ನಡೆಯಿತು..
ಕುಷ್ಟಗಿ: ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ನಿಮಿತ್ತ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಸನಸಾಬ್ ದೋಟಿಹಾಳ ನೇತ್ರತ್ವದಲ್ಲಿ ಸ್ವಾತಂತ್ರ‍್ಯ ನಡಿಗೆ ನಡೆಸಲಾಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ – ಹನಮಸಾಗರ ವತಿಯಿಂದ ೭೫ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಏಕತೆಗಾಗಿ ಸ್ವಾತಂತ್ರ‍್ಯ ನಡಿಗೆ ಜನಜಾಗೃತಿ ಪಾದಯಾತ್ರೆ ತಾಲೂಕಿನ ಎಸ್.ಗಂಗನಾಳ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನದಿಂದ ತಾವರಗೇರಾದ ಮಹಾತ್ಮಾ ಗಾಂಧಿ ವೃತ್ತದವರೆಗೆ ಪಾದಯಾತ್ರೆ ನಡೆಯಿತು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಭಾರತ ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎನ್ನುವಂತೆ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಪಕ್ಷ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕು ೭೫ನೇ ವರ್ಷದ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ, ಮಹನೀಯರ ತ್ಯಾಗ-ಬಲಿದಾನ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.