ಸ್ವತಂತ್ರ ಧರ್ಮ ಮಾನ್ಯತೆ ನೀಡಲು ಮತ್ತೆ ಸರ್ಕಾರಕ್ಕೆ ಮನವಿ

Advertisement

ಧಾರವಾಡ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಲಿಂಗಾಯತ ಮಠಾಧಿಪತಿ ಒಕ್ಕೂಟದಿಂದ ಮನವಿ ಸಲ್ಲಿಸಲಾಗುವುದು ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ ನೂರಾರು ಒಳಪಂಗಡಗಳು ಇರುವುದು ವಾಸ್ತವ ಸಂಗತಿ. ಈಗಾಗಲೇ ಕೆಲ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಂಗಡಗಳಲ್ಲಿ ಸೇರಿಸಲಾಗಿದೆ. ಇನ್ನೂಳಿದ ಪಂಗಡಗಳಲ್ಲಿ ಅನೇಕರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರನ್ನೂ ಸಹ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಎಲ್ಲ ದಾಖಲೆಗಳಲ್ಲಿ ಲಿಂಗಾಯತ ಎಂಬ ಶಬ್ದ ಮಾತ್ರ ಬಳಕೆಯಲ್ಲಿದೆ. ಎಲ್ಲಿಯೂ ವೀರಶೈವ ಲಿಂಗಾಯತ ಎಂದು ಇಲ್ಲ. ವೀರಶೈವವೂ ಕೂಡ ಲಿಂಗಾಯತ ಧರ್ಮದ ಒಂದು ಒಳಪಂಗಡ. ಕೆಲವರು ವೀರಶೈವ ಲಿಂಗಾಯತ ಶಬ್ದ ಬಳಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕು ಎಂದರು.
ಈ ಸಂಬಂಧ ಶಾಸಕರು, ಸಚಿವರು ಹಾಗೂ ರಾಜ್ಯ ಲೋಕಸಭಾ ಸದಸ್ಯರಿಗೆ ಮನವಿ ಮೂಲಕ ಆಗ್ರಹಿಸಲಾಗುವುದು. ಲಿಂಗಾಯತ ಧರ್ಮವನ್ನಾಗಿ ಮಾಡಲು ನಾವು ಸರ್ಕಾರಗಳಿಗೆ ಯಾವುದೇ ಗಡುವು ನೀಡುವುದಿಲ್ಲ. ಬದಲಾಗಿ ಹೋರಾಟ ಮಾಡುತ್ತೇವೆ. ಇಂದು ಸಿಖ್ ಹಾಗೂ ಜೈನ ಧರ್ಮಗಳು ಸ್ವತಂತ್ರ ಧರ್ಮಾಗಿರುವುದಕ್ಕೆ ಹೋರಾಟವೇ ಕಾರಣ. ಸತ್ಯಕ್ಕೆ ನ್ಯಾಯ ಸಿಗುವ ಭರವಸೆ ನಮಗಿದೆ ಎಂದು ಹೇಳಿದರು.
ಲಿಂಗಾಯತ ಸ್ವತಂತ್ರ ಧರ್ಮ ಮಾಡುವುದರಿಂದ ಹಿಂದುತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಹಾಗಂತ ನಾವೇನೂ ಹಿಂದು ವಿರೋಧಿಗಳಲ್ಲ. ಹಿಂದು ವೈದಿಕ ಧರ್ಮವಾಗಿದೆ. ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯಲ್ಲಿ ಎಲ್ಲಿಯೂ ಹಿಂದು ಪದವನ್ನು ಪ್ರಸ್ತಾಪಿಸಿಲ್ಲ. ಹಿಂದು ಎಂಬುದು ಜೀವನ ಮಾರ್ಗ. ಲಿಂಗಾಯತವನ್ನು ಸ್ವತಂತ್ರ ಧರ್ಮ ಮಾನ್ಯತೆ ನೀಡುವುದರಿಂದ ಹಿಂದುತ್ವಕ್ಕೆ ಯಾವ ತೊಂದರೆಯೂ ಆಗುವುದಿಲ್ಲ ಎಂದರು.
ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡಲು ರಾಜ್ಯದ ಸಂಸದರನ್ನು ಸಂಪರ್ಕಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳನ್ನು ಹೆದರಿಸುವುದಕ್ಕಾಗಿ ಈ ರೀತಿ ಮಾಡುತ್ತಿಲ್ಲ. ನ್ಯಾಯೋಚಿತವಾದ ಬೇಡಿಕೆಯನ್ನು ಈಡೇರಿಸುವಂತೆ ಹೋರಾಡುತ್ತಿದ್ದೇವೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲು ಈಗಾಗಲೇ ಚಿಂತನೆ ನಡೆದಿದೆ ಎಂದು ಹೇಳಿದರು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು, ಡಾ. ಗಂಗಾಮಾತಾಜೀ, ಬಸವೇಶ್ವರಿ ಮಾತಾಜೀ,‌ ಹಂದಿಗುಂದದ ಶಿವಾನಂದ ಸ್ವಾಮೀಜಿ, ಚಿದಾನಂದ ಸ್ವಾಮೀಜಿ ಹಾಗೂ ಇತರರು ಇದ್ದರು.