೨೬ ವರ್ಷಗಳ ಹಿಂದೆ, ಮೇ ೧೧ ಮತ್ತು ಮೇ ೧೩, ೧೯೯೮ರಂದು ಭಾರತ ತನ್ನ ವಿಧಿಯನ್ನು ಬದಲಾಯಿಸುವಂತಹ ಮಹತ್ವದ ಹೆಜ್ಜೆಯಾದ ಪರಮಾಣು ಶಕ್ತಿ ಪರೀಕ್ಷೆಯನ್ನು ಕೈಗೊಂಡಿತು. ೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಗೆಲುವು ಸಾಧಿಸಿ, ನೂತನ ದೇಶ ಬಾಂಗ್ಲಾದೇಶದ ಉದಯವನ್ನು ಹೊರತುಪಡಿಸಿದರೆ, ಇನ್ನಾವುದೇ ಸಾಧನೆ ಇಷ್ಟರಮಟ್ಟಿಗೆ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿರಲಿಲ್ಲ, ಜಾಗತಿಕವಾಗಿ ಗೌರವ ಸಂಪಾದಿಸಿರಲಿಲ್ಲ. ೨೬ ವರ್ಷಗಳ ಹಿಂದಿನ ನಿರ್ಧಾರ, ಭಾರತದ ಭದ್ರತೆ ಮತ್ತು ಸುರಕ್ಷತೆಯ ಮೇಲೂ ಪರಿಣಾಮ ಉಂಟುಮಾಡಿತ್ತು.
೨೦ ವರ್ಷಗಳ ಹಿಂದಿನಿಂದಲೂ ಭಾರತದ ಪರಮಾಣು ಮಿಲಿಟರಿ ಯೋಜನೆಗಳನ್ನು ಅತ್ಯಂತ ರಹಸ್ಯವಾಗಿ ಇಡಲಾಗಿತ್ತು. ಮೇ ೧೮, ೧೯೭೪ರಂದು ಭಾರತ ಕೈಗೊಂಡ ಮೊದಲ ಪರಮಾಣು ಪರೀಕ್ಷೆಯಾದ `ಸ್ಮೈಲಿಂಗ್ ಬುದ್ಧ’ ಯೋಜನೆಯ ಬಳಿಕ, ಈ ಕುರಿತ ಮಾಹಿತಿಗಳು ಅತ್ಯಂತ ಕಡಿಮೆ ಲಭ್ಯವಾಗಿದ್ದವು.
ಮೇ ೧೧, ೧೯೯೮ರಂದು, ಭಾರತದ ರಹಸ್ಯ ಪರಮಾಣು ಯೋಜನೆ ಜಗತ್ತಿನ ಮುಂದೆ ಬಹಿರಂಗಗೊಂಡಿತು. ಆ ದಿನದಂದು ಪೋಖ್ರಾನ್‌ನ ನೆಲದಾಳದಲ್ಲಿ ಮೂರು ಪರಮಾಣು ಪರೀಕ್ಷೆಗಳು, ಅದಾದ ಎರಡು ದಿನಗಳ ಬಳಿಕ ಇನ್ನೆರಡು ಪರೀಕ್ಷೆಗಳ ನಂತರ, ಭಾರತ ಸರ್ಕಾರ ತಾನು ಏನು ಮಾಡಿದ್ದೇನೆ ಎನ್ನುವುದನ್ನು ಜಗತ್ತಿಗೆ ತಿಳಿಸಿತು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು “ನಮ್ಮ ಉದ್ದೇಶ ಶಾಂತಿ ಸ್ಥಾಪನೆ. ಆದರೆ ನಾವು ನಮ್ಮ ಕ್ರಮಗಳ ಕುರಿತು ಸ್ಪಷ್ಟತೆ ಹೊಂದಿದ್ದೇವೆ. ಭಾರತದ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ” ಎಂದಿದ್ದರು.
೧೯೯೮ರ ಅಣ್ವಸ್ತ್ರ ಪರೀಕ್ಷೆ ಮತ್ತು ಪರಿಣಾಮ
ಭಾರತ ೧೯೯೮ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ, ವ್ಯಾಪಕ ಪ್ರತಿರೋಧ ವ್ಯಕ್ತವಾಯಿತು. ಅಮೆರಿಕಾದೊಡನೆ ಭಾರತದ ಸಂಬಂಧವೂ ಹದಗೆಟ್ಟಿತು. ಪರಮಾಣು ಪರೀಕ್ಷೆಗಳನ್ನು ಮೇ ೧೩ರಂದು ನಡೆಸಿದ ಬೆನ್ನಲ್ಲೇ, ಅಮೆರಿಕಾ ಗ್ಲೆನ್ ಅಮೆಂಡ್‌ಮೆಂಟ್ ಎಂಬ ನಿರ್ದಿಷ್ಟ ಕಾನೂನಿನಡಿ ಭಾರತದ ಮೇಲೆ ದಂಡನೆ ವಿಧಿಸಿತು. ಈ ದಂಡನೆಗಳು ಅಣ್ವಸ್ತ್ರಗಳ ಪರೀಕ್ಷೆ ನಡೆಸುವ ದೇಶಗಳನ್ನು ಶಿಕ್ಷಿಸುವ ನಿಟ್ಟಿನಲ್ಲಿ ಇರುವ ಕಾನೂನುಗಳಾಗಿವೆ.
ಅದಾಗಿ ಕೆಲ ದಿನಗಳ ಬಳಿಕ, ಮೇ ೨೮ ಮತ್ತು ೩೦ರಂದು, ಪಾಕಿಸ್ತಾನವೂ ಭಾರತಕ್ಕೆ ಪ್ರತ್ಯುತ್ತರವಾಗಿ ತನ್ನ ಅಣ್ವಸ್ತ್ರಗಳನ್ನು ಪರೀಕ್ಷಿಸಿತು.
ಭಾರತವನ್ನು ತೀವ್ರವಾಗಿ ಖಂಡಿಸಿದ ಚೀನಾ, ಅಣ್ವಸ್ತ್ರ ಪ್ರಸರಣವನ್ನು ತಡೆಯಬೇಕೆಂಬ ಜಗತ್ತಿನ ಮಹತ್ವಾಕಾಂಕ್ಷೆಯನ್ನು ಭಾರತ ಕಡೆಗಣಿಸಿದೆ ಎಂದು ಆರೋಪಿಸಿತು. ಜಗತ್ತನ್ನು ಸುರಕ್ಷಿತವಾಗಿಡಲು ಎಲ್ಲರೂ ಒಪ್ಪಿಕೊಂಡಿರುವ ಕಾನೂನುಗಳನ್ನು ಭಾರತ ಮೀರಲು ಪ್ರಯತ್ನಿಸಿದೆ ಎಂದು ಚೀನಾ ದೂಷಿಸಿತ್ತು.
ಇನ್ನು ದೇಶದೊಳಗೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಣ್ವಸ್ತ್ರ ಪರೀಕ್ಷೆ ನಡೆಸುವ ನಿರ್ಧಾರದ ಕುರಿತು ಸಹಮತ ಹೊಂದಿರಲಿಲ್ಲ. ಅವರು ಬಹಿರಂಗವಾಗಿಯೇ ಇದೊಂದು ತಪ್ಪು ನಿರ್ಧಾರ ಎಂದು ಕರೆದಿದ್ದರು.
ಈಗ ೨೦೨೪ರಲ್ಲಿ ನಿಂತು ಹಿಂದಿರುಗಿ ನೋಡಿದಾಗ, ೧೯೯೮ರಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಗಳು ನಿಜಕ್ಕೂ ಗಮನಾರ್ಹ ತಿರುವಾಗಿತ್ತು. ಅಣ್ವಸ್ತ್ರ ಪರೀಕ್ಷೆಯ ಮೂಲಕ ಭಾರತ ಇದ್ದಕ್ಕಿದ್ದಂತೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಂಡಂತಾಗಿತ್ತು. ಅಣ್ವಸ್ತ್ರ ಪರೀಕ್ಷೆಗಳು ಜಗತ್ತಿನಲ್ಲಿ ಭಾರತದ ಸ್ಥಾನಮಾನವನ್ನು ವೃದ್ಧಿಸಿ, ಜಾಗತಿಕ ವಿಚಾರಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಒದಗಿಸಿದವು.
ಅಣ್ವಸ್ತ್ರ ಸಾಮರ್ಥ್ಯ ವೃದ್ಧಿಯೆಡೆಗೆ ಭಾರತದ ದಾಪುಗಾಲು ಮತ್ತು ಅದಕ್ಕೆ ಸಂಬಂಧಿತ ಬೆಳವಣಿಗೆಗಳು, ಸಾಮಾನ್ಯವಾಗಿದ್ದ ಮೂರು ನಂಬಿಕೆಗಳನ್ನು ಅಲ್ಲಗಳೆದವು.
೩ ತಪ್ಪು ನಂಬಿಕೆಗಳಿಗೆ ಸವಾಲುಗಳು
ಮೊದಲನೆಯ ತಪ್ಪು ಕಲ್ಪನೆಯೆಂದರೆ, ಕೇವಲ ಬಿಜೆಪಿ ಸರ್ಕಾರ ಮಾತ್ರವೇ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದ್ದು, ಭಾರತೀಯರು ಇದನ್ನು ಒಪ್ಪಿರಲಿಲ್ಲ.
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಕೈಗೊಂಡಿತ್ತಾದರೂ, ಸ್ವಾತಂತ್ರ‍್ಯಾನಂತರ ಬಹುತೇಕ ಎಲ್ಲ ಪ್ರಧಾನಿಗಳೂ ಭಾರತದ ಅಣ್ವಸ್ತ್ರ ಸಾಮರ್ಥ್ಯ ವೃದ್ಧಿಸುವಲ್ಲಿ ಪಾತ್ರ ವಹಿಸಿದ್ದರು. ಆಯುಧಗಳನ್ನು ದೂರವಿಡಬೇಕೆಂದು ಆಗ್ರಹಿಸಿದ್ದ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಭಾರತದ ಪರಮಾಣು ಕಾರ್ಯಕ್ರಮಗಳು ದೇಶವನ್ನು ರಕ್ಷಿಸಲು ನೆರವಾಗಬಹುದು ಎಂದು ನಂಬಿದ್ದರು.
ಭಾರತ ಸೂಕ್ತ ಸಮಯದಲ್ಲಿ ಉಗಿ ಶಕ್ತಿಯನ್ನು ಕಂಡುಹಿಡಿದಿದ್ದರಿಂದ ಔದ್ಯಮಿಕ ಕ್ರಾಂತಿಯನ್ನು ತಪ್ಪಿಸಿಕೊಂಡು, ಬ್ರಿಟಿಷರ ವಸಾಹತಾಗಿ ರೂಪುಗೊಂಡಿತು ಎಂದು ನೆಹರೂ ಭಾವಿಸಿದ್ದರು. ಆದ್ದರಿಂದಲೇ ಭಾರತ ಶಾಂತಿಯುತ ಬಳಕೆಗಾಗಿ ಪರಮಾಣು ಶಕ್ತಿಯನ್ನು ಹೊಂದಬೇಕು ಎಂದು ನೆಹರೂ ಅಭಿಪ್ರಾಯ ಪಟ್ಟಿದ್ದರು. ಅದರೊಡನೆ, ಒಂದು ವೇಳೆ ಭಾರತಕ್ಕೇನಾದರೂ ಅನಿವಾರ್ಯವಾದರೆ, ಭಾರತ ಶಾಂತಿಯುತ ಉದ್ದೇಶಗಳಿಗಲ್ಲದೆಯೂ ಪರಮಾಣು ಶಕ್ತಿಯನ್ನು ಬಳಸಿಕೊಳ್ಳಲು ಹಿಂಜರಿಯಬಾರದು ಎಂದೂ ಅವರು ಹೇಳಿದ್ದರು.
ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ, ೧೯೬೪ರಲ್ಲಿ ಚೀನಾ ಲಾಪ್ ನಾರ್ ಎಂಬಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಇದಾದ ಬಳಿಕ, ಭಾರತದ ಪರಮಾಣು ಯೋಜನೆಗಳ ಜನಕ ಹೋಮಿ ಜಹಾಂಗೀರ್ ಭಾಭಾ ಅವರಿಗೆ ಭಾರತಕ್ಕಾಗಿ ಅಣ್ವಸ್ತ್ರಗಳನ್ನು ರೂಪಿಸುವ ಪ್ರಯತ್ನ ನಡೆಸಲು ಅನುಮತಿ ಲಭಿಸಿತು. ಶಾಂತಿಯುತ ಉದ್ದೇಶಗಳಿಗಾಗಿ ಭೂಮಿಯಾಳದಲ್ಲಿ ಹೇಗೆ ಪರಮಾಣು ಸ್ಫೋಟಗಳನ್ನು ಕೈಗೊಳ್ಳಬಹುದು ಎಂದು ತಿಳಿಯಲು ಒಂದು ವಿಶೇಷ ತಂಡವನ್ನು ರಚಿಸಲಾಯಿತು.
ಇಂದಿರಾ ಗಾಂಧಿಯವರು ೧೯೭೪ರಲ್ಲಿ ಭಾರತದ ಮೊದಲ ಪರಮಾಣು ಪರೀಕ್ಷೆಗೆ ಅನುಮತಿ ನೀಡಿದ್ದಾರೆನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಪರೀಕ್ಷೆಯನ್ನು ಶಾಂತಿಯುತ ಉದ್ದೇಶಗಳಿಗೆ ಎಂದು ಕರೆದರೂ, ಬಳಿಕ ಈ ಯೋಜನೆಯ ಉಸ್ತುವಾರಿಯಾಗಿದ್ದ ರಾಜಾ ರಾಮಣ್ಣನವರು ಇದೊಂದು ಪರಮಾಣು ಶಸ್ತ್ರಾಸ್ತ್ರದ ಪರೀಕ್ಷೆಯಾಗಿತ್ತು ಎಂದಿದ್ದರು. ಹೆಚ್ಚಿನವರಿಗೆ ತಿಳಿದಿರದ ಇನ್ನೊಂದು ವಿಚಾರವೆಂದರೆ, ೧೯೮೫ರಲ್ಲಿ ರಾಜೀವ್ ಗಾಂಧಿಯವರ ಆಡಳಿತದ ಅವಧಿಯಲ್ಲಿ ಭಾರತ ದಶಕದ ಹಿಂದೆ ಪರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾದ, ಜಲಜನಕ ಬಾಂಬ್ ಅನ್ನು ಪರೀಕ್ಷಿಸಲು ಉದ್ದೇಶಿಸಿತ್ತು.
೧೯೮೮-೧೯೮೯ರ ಕೊನೆಯಲ್ಲಿ, ರಾಜೀವ್ ಗಾಂಧಿ ಭಾರತದ ಪರಮಾಣು ಶಕ್ತಿ ಮತ್ತು ರಕ್ಷಣಾ ಸಂಶೋಧನಾ ತಂಡಗಳಿಗೆ ಪರಮಾಣು ರಕ್ಷಣಾ ಸಾಮರ್ಥ್ಯದ ಕುರಿತು ಕಾರ್ಯಾಚರಿಸಲು ಅನುಮತಿ ನೀಡಿದರು. ೧೯೯೦ರ ವೇಳೆಗೆ, ಎಲ್ಲ ಪ್ರಧಾನಿಗಳೂ ಬೆಂಬಲಿಸಿದ್ದ ಪೂರ್ಣ ಪ್ರಮಾಣದ ಪರಮಾಣು ಶಸ್ತ್ರಾಸ್ತ್ರ ಯೋಜನೆ ಸಿದ್ಧಗೊಂಡಿತ್ತು. ಆದರೆ ಐತಿಹಾಸಿಕವಾದ, ಶಕ್ತಿ ಹೆಸರಿನ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿದ ಸಾಧನೆ ಆಗಿನ ಪ್ರಧಾನಿ ವಾಜಪೇಯಿಯವರಿಗೆ ಸಲ್ಲುತ್ತದೆ.
ಇನ್ನು ಎರಡನೇ ಮಿಥ್ಯ ವಿಚಾರವೆಂದರೆ, ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದ ಬಳಿಕ ಭಾರತ ಜಗತ್ತಿನಲ್ಲಿ ಏಕಾಂಗಿಯಾಗಲಿದೆ, ಆರ್ಥಿಕ ಸಮಸ್ಯೆಗಳು ಮತ್ತು ಟೀಕೆಗಳನ್ನು ಎದುರಿಸಲಿದೆ ಎನ್ನುವುದಾಗಿತ್ತು. ಆದರೆ ಜಸ್ವಂತ್ ಸಿಂಗ್ ಅವರು ಅಮೆರಿಕಾದ ಸ್ಟೊಬ್ ಟಾಲ್ಬಟ್ ಅವರೊಡನೆ ಮಾತುಕತೆ ನಡೆಸಿದ ಬಳಿಕ, ಭಾರತ ಅಣ್ವಸ್ತ್ರ ಪ್ರಸರಣ ನಡೆಸಿಲ್ಲ ಎನ್ನುವುದು ಸ್ಪಷ್ಟವಾಯಿತು.
ಇದರ ಪರಿಣಾಮವಾಗಿ, ಅಮೆರಿಕಾ ಭಾರತವನ್ನು ವಿಶೇಷ ಪ್ರಕರಣ ಎಂದು ಪರಿಗಾಣಿಸಲಾರಂಭಿಸಿ, ಭಾರತ-ಅಮೆರಿಕಾ ನಾಗರಿಕ ಪರಮಾಣು ಒಪ್ಪಂದಕ್ಕೆ ಹಾದಿ ಮಾಡಿತು. ಇದರಿಂದಾಗಿ ಭಾರತ ಅಣ್ವಸ್ತ್ರಗಳಿಗೆ ಸಂಬಂಧಿಸಿದ ಹಲವು ಮುಖ್ಯ ಒಪ್ಪಂದಗಳಿಗೆ ಸಹಿ ಹಾಕಿರದಿದ್ದರೂ, ಅಮೆರಿಕಾದ ನೆರವಿನೊಡನೆ ನಾಗರಿಕ ಅಣುಶಕ್ತಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಯಿತು.
ಇನ್ನು ಮೂರನೇ ಸುಳ್ಳು ನಂಬಿಕೆ ಎಂದರೆ, ಹಲವು ಪಾಶ್ಚಾತ್ಯ ತಜ್ಞರು ಭಾರತ ಮತ್ತು ಅದರ ಸುತ್ತಲಿನ ದಕ್ಷಿಣ ಏಷ್ಯಾದ ರಾಷ್ಟ್ರಗಳು ಪರಮಾಣು ಶಸ್ತಾಸ್ತ್ರಗಳ ವಿಚಾರದಲ್ಲಿ ನಂಬಿಕಾರ್ಹವಲ್ಲ ಎಂದು ಭಾವಿಸಿದ್ದರು. ಪರಮಾಣು ಶಸ್ತಾಸ್ತ್ರಗಳು ಸೋವಿಯತ್ ಒಕ್ಕೂಟ ಮತ್ತು ಅಮೆರಿಕಾಗಳು ಪರಸ್ಪರರ ಮೇಲೆ ದಾಳಿ ನಡೆಸದ ರೀತಿ ತಡೆದು, ಶಾಂತಿ ಉಳಿಸಿದಂತೆ ಪರಸ್ಪರ ವಿನಾಶದ ಭೀತಿ ದಕ್ಷಿಣ ಏಷ್ಯಾದಲ್ಲಿ ಕಾರ್ಯಾಚರಿಸದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ವಾಸ್ತವವಾಗಿ, ಪರಮಾಣು ಶಸ್ತಾಸ್ತ್ರಗಳನ್ನು ನಿರ್ವಹಿಸಲು ಭಾರತ ಅತ್ಯಂತ ಯೋಜಿತ ನಿಯಮಗಳು ಮತ್ತು ವ್ಯವಸ್ಥೆಗಳನ್ನು ಹೊಂದಿದೆ (ಕಮಾಂಡ್, ಕಂಟ್ರೋಲ್, ಕಮ್ಯುನಿಕೇಷನ್, ಕಂಪ್ಯೂಟರ್ ಮತ್ತು ಇಂಟಲಿಜೆನ್ಸ್ – ಸಿ೪ಐ). ಇವುಗಳು ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟಗಳು ತಮ್ಮ ಅಣ್ವಸ್ತ್ರ ಯೋಜನೆಗಳ ಜಾರಿಯ ೨೫ ವರ್ಷಗಳ ಬಳಿಕ ಹೊಂದಿದ್ದ ವ್ಯವಸ್ಥೆಗಳಿಗಿಂತಲೂ ಆಧುನಿಕವಾಗಿವೆ. ಅಣ್ವಸ್ತ್ರಗಳು ಯುದ್ಧ ತಡೆಯುವ ಕಾರ್ಯತಂತ್ರ ದಕ್ಷಿಣ ಏಷ್ಯಾದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಶಸ್ವಿಯಾಗಿವೆ.
ಭಾರತದ ಆಧುನಿಕ ಅಣ್ವಸ್ತ್ರ ಸಿ೪ಐ
ಕಮಾಂಡ್: ಕಮಾಂಡ್ ಎನ್ನುವುದು ಪರಮಾಣು ಶಸ್ತಾಸ್ತ್ರಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ನಾಯಕತ್ವದ ವಿನ್ಯಾಸವಾಗಿದೆ. ಭಾರತದ ಬಳಿ ಯಾವಾಗ ಮತ್ತು ಹೇಗೆ ಅಣ್ವಸ್ತ್ರ ಬಳಸಬೇಕು ಎಂಬುದನ್ನು ನಿರ್ಧರಿಸುವ ಸೂಕ್ತ ನಾಯಕತ್ವ ಸರಪಳಿಯಿದೆ. ಇಂತಹ ಮಹತ್ವದ ನಿರ್ಧಾರಗಳನ್ನು ಜವಾಬ್ದಾರಿಯುತವಾಗಿ ಕೈಗೊಳ್ಳಲಾಗುತ್ತದೆ.
ಕಂಟ್ರೋಲ್: ಇದು ಕಮಾಂಡ್ ನಿರ್ಧರಿಸಿದ ಬಳಿಕವಷ್ಟೇ ಅಣ್ವಸ್ತ್ರದ ಬಳಕೆಯಾಗುವುದನ್ನು ಖಾತ್ರಿಪಡಿಸುವ ಕಟ್ಟುನಿಟ್ಟಿನ ನಿಯಮವಾಗಿದೆ.
ಕಮ್ಯುನಿಕೇಶನ್: ಇದು ಅಣ್ವಸ್ತçಗಳ ಕುರಿತ ಸಂದೇಶಗಳನ್ನು ಸುರಕ್ಷಿತವಾಗಿ ಕಳುಹಿಸಲು ನೆರವಾಗುತ್ತದೆ. ಇದೊಂದು ರೀತಿ ಖಾಸಗಿ, ಅತ್ಯಂತ ಸುಭದ್ರವಾದ, ಕೆಲವರು ಮಾತ್ರವೇ ಬಳಸಬಹುದಾದ ಸಂವಹನ ವ್ಯವಸ್ಥೆಯಾಗಿದೆ. ಇದು ಮಹತ್ವದ ಮಾಹಿತಿಗಳು ಸೋರಿಕೆಯಾಗದಂತೆ, ದುರ್ಬಳಕೆಯಾಗದಂತೆ ಖಾತ್ರಿಪಡಿಸುತ್ತದೆ.
ಕಂಪ್ಯೂಟರ್: ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಎಲ್ಲವನ್ನೂ ನಿರ್ವಹಿಸಲು ಅತ್ಯಾಧುನಿಕ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತದೆ.
ಇಂಟಲಿಜೆನ್ಸ್: ಇದು ದೇಶದ ಅಣ್ವಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಸಂಭಾವ್ಯ ಅಪಾಯಗಳಿಂದ ರಕ್ಷಿಸುತ್ತದೆ.
ಸರಳವಾಗಿ ಹೇಳುವುದಾದರೆ, ಭಾರತ ತನ್ನ ಅಣ್ವಸ್ತ್ರಗಳ ಕುರಿತು ಅತ್ಯಾಧುನಿಕ ನಿಯಮಗಳು ಮತ್ತು ಟೂಲ್‌ಕಿಟ್‌ಗಳನ್ನು ಹೊಂದಿದೆ. ಇದು ಆಕಸ್ಮಿಕವಾಗಿ ಅಥವಾ ಅನುಮತಿಯಿಲ್ಲದೆ ಅಣ್ವಸ್ತ್ರಗಳ ಬಳಕೆಯಾಗದಂತೆ ತಡೆಯುತ್ತದೆ. ಅದರೊಡನೆ, ನೈಜ ಅವಶ್ಯಕತೆ ಎದುರಾದಾಗ ಮಾತ್ರ ಅವುಗಳ ಬಳಕೆಯಾಗುವಂತೆ ಮಾಡುತ್ತದೆ.
ಭಾರತದ ಅನುಕೂಲತೆ ಮತ್ತು ಉಕ್ರೇನಿನ ದೌರ್ಬಲ್ಯ
ಒಂದು ಕಾಲದಲ್ಲಿ ಅಣ್ವಸ್ತ್ರ ರಾಷ್ಟ್ರವಾಗಿದ್ದು, ಬಳಿಕ ಅದನ್ನು ತ್ಯಜಿಸಿದ ಉಕ್ರೇನ್, ಇಂದು ಅಣ್ವಸ್ತ್ರ ಹೊಂದಿರುವ ರಷ್ಯಾದಿಂದ ಆತಂಕ ಎದುರಿಸುತ್ತಿದೆ. ಇದಕ್ಕೆ ಹೋಲಿಸಿದರೆ, ಭಾರತ ತನ್ನ ನಾಯಕರು ಮತ್ತು ವಿಜ್ಞಾನಿಗಳ ದೂರದೃಷ್ಟಿಗೆ ಕೃತಜ್ಞವಾಗಿರಬೇಕು. ಯಾವುದಾದರೂ ದೇಶ ಭಾರತದ ವಿರುದ್ಧ ಅಣ್ವಸ್ತ್ರದ ಆತಂಕ ಮೂಡಿಸಲು ಪ್ರಯತ್ನಿಸಿದರೆ, ಭಾರತದ ಬಳಿ ಅದಕ್ಕೆ ಸೂಕ್ತ ಪ್ರತ್ಯುತ್ತರವಿದೆ.
ಸೋವಿಯತ್ ಒಕ್ಕೂಟದ ಪತನಾನಂತರ ಉಕ್ರೇನ್ ಬಳಿಯೂ ಅಣ್ವಸ್ತ್ರಗಳಿದ್ದವು. ಆದರೆ ೧೯೯೦ರ ದಶಕದಲ್ಲಿ ಉಕ್ರೇನ್ ಅವುಗಳನ್ನು ತ್ಯಜಿಸಲು ನಿರ್ಧರಿಸಿತು. ರಷ್ಯಾ, ಅಮೆರಿಕಾ ಮತ್ತು ಯುಕೆಗಳು ಸಹಿ ಹಾಕಿದ ಬುಡಾಪೆಸ್ಟ್ ಒಪ್ಪಂದದಂತಹ ತನ್ನ ರಕ್ಷಣೆ ಮತ್ತು ಸಾರ್ವಭೌಮತ್ವದ ಒಪ್ಪಂದಗಳನ್ನು ನಂಬಿ ಉಕ್ರೇನ್ ಈ ನಿರ್ಧಾರಕ್ಕೆ ಬಂದಿತ್ತು. ಆದರೆ ಈಗ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಿದ್ದರೂ, ಉಕ್ರೇನ್ ಬಳಿ ರಷ್ಯಾ ಹಿಂದೇಟು ಹಾಕುವಂತೆ ಮಾಡುವ ಅಣ್ವಸ್ತ್ರಗಳೇ ಇಲ್ಲದಾಗಿದೆ.