ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ನಿಗೂಢ ರೀತಿಯ ಸ್ಫೋಟದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಭೀತಿಯನ್ನು ಉಂಟು ಮಾಡಿದ್ದರೆ, ರಾಜಕೀಯ ವಲಯದಲ್ಲಿ ಇದೇ ಒಂದು ಬ್ರಹ್ಮಾಸ್ತ್ರವಾಗಿ ಕದನಕ್ಕಿಳಿಯಲು ಪ್ರೇರಣೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿ. ರಾಮೇಶ್ವರಂ ಕೆಫೆಯಲ್ಲಿ ಜರುಗಿರುವ ಸ್ಫೋಟ ಯಾವುದೇ ದೃಷ್ಟಿಕೋನದಿಂದ ನೋಡಿದರೂ ಒಂದು ಅಪರಾಧ ಕೃತ್ಯ. ಪೊಲೀಸಿನವರು ಮಾತ್ರ ತನಿಖೆಯ ಮೂಲಕ ಈ ಪ್ರಕರಣವನ್ನು ಬೇಧಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬಲ್ಲರು. ಆದರೆ, ಸ್ಫೋಟದ ಬೆನ್ನ ಹಿಂದೆಯೇ ರಾಜಕೀಯ ಕುರುಕ್ಷೇತ್ರದ ಶಸ್ತ್ರಾಭ್ಯಾಸದಂತೆ ವಾಗ್ಯುದ್ಧವನ್ನು ಆರಂಭಿಸಿರುವ ರಾಜಕೀಯ ಪಟುಗಳ ವರ್ತನೆಯ ಪರಿಣಾಮವೆಂದರೆ ಸರಿ ತಪ್ಪುಗಳು ಜನರಿಗೆ ತಿಳಿಯದಂತಹ ವಾತಾವರಣ ಸೃಷ್ಟಿಯಾಗಿದೆ. ಈ ಸ್ಫೋಟಕ್ಕೆ ನಾನಾ ರೀತಿಯ ಕಾರಣಗಳನ್ನು ಸಾಧ್ಯತೆಗಳ ಆಧಾರದ ಮೇರೆಗೆ ಜೋಡಿಸಲಾಗುತ್ತಿರುವ ಪರಿಣಾಮವಾಗಿ ಯಾವುದು ಸತ್ಯ ಯಾವುದು ಮಿಥ್ಯ ಎಂಬುದು ಸ್ವತಃ ಪೊಲೀಸರಿಗೂ ಅರ್ಥವಾಗದೇ ದಿಕ್ಕೆಡುವ ಸ್ಥಿತಿ ನಿರ್ಮಾಣವಾಗಿರುವುದು ಈಗಿನ ಪರಿಸ್ಥಿತಿಯ ದಿಕ್ಸೂಚಿ. ಸ್ಫೋಟಕ್ಕೆ ಬಳಸಿರುವ ಸಾಮಗ್ರಿಯನ್ನು ಅರಿಯುವ ಜೊತೆಗೆ ಆರೋಪಿಯನ್ನು ಗುರುತಿಸಲು ಪೊಲೀಸರು ಮುಂದಾಗಿರುವ ಸಂದರ್ಭದಲ್ಲಿ ತಲೆದೋರಿರುವ ಗೊಂದಲದ ವಾತಾವರಣ ನಿರಾಧಾರ ಲೆಕ್ಕಾಚಾರಗಳಿಗೆ ಗ್ರಾಸವಾಗಿದೆ.
ಇದಕ್ಕೆ ಪೂರಕವಾಗಿ ರಾಜ್ಯಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ನಂತರ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ಮೊಳಗಿಸಿದ ಎಂಬ ಆರೋಪದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ಪೊಲೀಸರು ಮೂವರನ್ನು ದಸ್ತಗಿರಿ ಮಾಡಿರುವುದು ಈಗ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಮುಖಂಡರ ಪ್ರಕಾರ ಖಾಸಗಿ ತಜ್ಞರು ನೀಡಿರುವ ಎಫ್‌ಎಸ್‌ಎಲ್ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿರುವುದು ಖಚಿತವಾಗಿದೆ. ಇದರಿಂದ ಕಳೆದ ನಾಲ್ಕೈದು ದಿನಗಳಿಂದ ಸೃಷ್ಟಿಯಾಗಿದ್ದ ವಿವಾದಾತ್ಮಕ ಬೆಳವಣಿಗೆಗೆ ಒಂದು ರೀತಿಯಲ್ಲಿ ನಿಶ್ಚಿತ ರೂಪ ದೊರೆತಂತಾಗಿದೆ.
ಆದರೆ, ಸರ್ಕಾರದ ಪರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಪಾದಿಸುವಂತೆ `ಖಾಸಗಿಯವರು ಕೊಡುವ ವರದಿಯನ್ನು ನಾವು ಒಪ್ಪುವುದಿಲ್ಲ. ಅಧಿಕೃತವಾಗಿ ಎಫ್‌ಎಸ್‌ಎಲ್ ವರದಿಯನ್ನಷ್ಟೆ ನಂಬುತ್ತೇವೆ’ ಎಂದು ಸ್ಪಷ್ಟಪಡಿಸಿದ್ದರೂ ಗೊಂದಲ ನಿಲ್ಲುತ್ತಿಲ್ಲ. ಇದೇ ಸಂದರ್ಭದಲ್ಲಿ ಎಫ್‌ಎಸ್‌ಎಲ್ ವರದಿ ಸರ್ಕಾರಕ್ಕೆ ತಲುಪಿದ್ದರೂ ಅದನ್ನು ಮರೆಮಾಚಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ನಿಜ ಸುಳ್ಳುಗಳ ಸಂಘರ್ಷ ಭುಗಿಲೆದ್ದಿದೆ.
ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗುವ ಸನ್ನಿವೇಶವಿರುವುದರಿಂದ ಸಹಜವಾಗಿಯೇ ಇಂತಹ ಪ್ರಕರಣಗಳು ರಾಜಕೀಯವಾಗಿ ಪ್ರಬಲ ಅಸ್ತ್ರವಾಗಿ ರಾಜಕೀಯ ಮುಖಂಡರು ಬಳಸಲು ಹೊರಡುತ್ತಾರೆ. ಹೀಗೆ ಮಾಡುವಾಗ ವೈಚಾರಿಕತೆ ಇಲ್ಲವೇ ವಾಸ್ತವಿಕ ಪ್ರಜ್ಞೆಯನ್ನು ಮರೆತವರಂತೆ ನಡೆದುಕೊಳ್ಳುವುದು ಅನಿವಾರ್ಯವೇನೋ ಎಂಬಂತಹ ಸ್ಥಿತಿಯನ್ನು ಸೃಷ್ಟಿಸುತ್ತಿರುವುದು ಪರಿಸ್ಥಿತಿಯ ಇನ್ನೊಂದು ಮುಖ. ಈಗ ಪ್ರತಿಪಕ್ಷವಾಗಿರುವ ಬಿಜೆಪಿಯವರು ಕೇವಲ ೧೦ ತಿಂಗಳ ಹಿಂದೆ ಸರ್ಕಾರದ ಜವಾಬ್ದಾರಿ ಹೊತ್ತಿದ್ದರು. ಈಗ ಸರ್ಕಾರದ ಸಾರಥ್ಯ ಕಾಂಗ್ರೆಸ್ ಪಕ್ಷದವರ ಬಳಿ ಇದೆ. ಹತ್ತು ತಿಂಗಳ ಹಿಂದೆ ಕಾಂಗ್ರೆಸ್‌ನವರು ಬಳಸುತ್ತಿದ್ದ ರಾಜಕೀಯ ಪಟ್ಟುಗಳು ಹಾಗೂ ನಿಲುವುಗಳ ಮೂಲಕ ಸರ್ಕಾರದ ರಾಜೀನಾಮೆಗೆ ಪಟ್ಟು ಹಿಡಿಯುತ್ತಿದ್ದ ಮಾರ್ಗವನ್ನೇ ಈಗ ಬಿಜೆಪಿಯವರು ಬಳಸುತ್ತಿರುವುದು ರಾಜಕಾರಣವೆಂಬುದು ಕೇವಲ ಅಧಿಕಾರದ ಸುತ್ತ ಪ್ರದಕ್ಷಿಣೆ ಹಾಕುವ ಗುರುತ್ವಾಕರ್ಷಣೆಗೆ ಸೀಮಿತವಾಗಿದೆ ಎಂದು ನಂಬುವಂತಾಗಿದೆ.
ಪಕ್ಷ ಯಾವುದೇ ಇರಲಿ ಅದಕ್ಕೊಂದು ವೈಚಾರಿಕತೆಯ ಸ್ಪಷ್ಟತೆ ಇದ್ದಾಗ ಜನರಿಗೆ ಅದರ ಬಗ್ಗೆ ವಿಶ್ವಾಸಾರ್ಹತೆ ಮೂಡಲು ಸಾಧ್ಯವಾಗುತ್ತದೆ. ಸರ್ಕಾರ ನಡೆಸುವಾಗ ಒಂದು ಮಾರ್ಗ, ಪ್ರತಿಪಕ್ಷದಲ್ಲಿರುವಾಗ ಇನ್ನೊಂದು ಮಾರ್ಗ ಅನುಸರಿಸುವ ನೀತಿ ಯಾವುದೇ ದೃಷ್ಟಿಕೋನದಿಂದ ನೋಡಿದರೂ ರಾಜಧರ್ಮವಾಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಉಚಿತ ಮನರಂಜನೆ ದೊರೆಯಬಹುದೇ ವಿನಃ ಲೋಕ ಹಿತವೆಂಬುದು ಯಾವುದೇ ರೀತಿಯಲ್ಲಿ ಸಾಧಿತವಾಗುವುದಿಲ್ಲ. ಹೀಗಾಗಿ ಸ್ಫೋಟ, ದೊಂಬಿ, ದರೋಡೆ, ದೌರ್ಜನ್ಯದಂತಹ ಪ್ರಕರಣಗಳ ವಿಚಾರಣೆ ಹಾಗೂ ತನಿಖೆಯನ್ನು ಪೊಲೀಸರು ಹಾಗೂ ನ್ಯಾಯಾಲಯಗಳ ವಿವೇಚನೆಗೆ ಬಿಟ್ಟರೆ ಆಗ ಕಾನೂನಿನ ಆಡಳಿತ ನಿಷ್ಪಕ್ಷಪಾತವಾಗಿ ಜಾರಿಗೆ ಬರಲು ಸಾಧ್ಯವಾಗುತ್ತದೆ. ಹಾಗೊಮ್ಮೆ ತನಿಖೆಯ ಜಾಡು ತಪ್ಪಿದಾಗ ಎಚ್ಚರಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಿದರೆ ಅದು ಸರಿಯಾದ ಮಾರ್ಗ. ಅದನ್ನು ಬಿಟ್ಟು ತನಿಖೆಗೆ ಮೊದಲೇ ನಿರ್ಣಯಗಳನ್ನು ಕೊಡುವ ರೀತಿಯಲ್ಲಿ ರಾಜಕೀಯ ಪಕ್ಷಗಳು ಹೊರಟರೆ ಅಮಾಯಕರು ಅಪರಾಧಿಗಳಾಗಿ ಹಾಗೂ ಅಪರಾಧಿಗಳು ಅಮಾಯಕರಾಗಿ ರೂಪಾಂತರಗೊಳ್ಳುವ ಎಲ್ಲ ಅಪಾಯಗಳೂ ಇವೆ ಎಂಬುದನ್ನು ಸಮಸ್ತರೂ ಮನಗಂಡು ಎಚ್ಚರದಿಂದ ಹೆಜ್ಜೆ ಇಡುವುದು ನಿಜವಾದ ಅರ್ಥದಲ್ಲಿ ರಾಜಮಾರ್ಗ.