ಸ್ನೇಹದ ಕರೆಗೆ ಕೃಷ್ಣೆ ಹರಿದು ಬರಲಿ

ಸಂಪಾದಕೀಯ
Advertisement

ಹಿಂದಿನಿಂದಲೂ ಮಹಾರಾಷ್ಟ್ರ ಸರ್ಕಾರ ಬೇಸಿಗೆ ಕಾಲದಲ್ಲಿ ಕೊಯ್ನಾ ಮತ್ತು ಉಜನಿ ಜಲಾಶಯಗಳಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗೆ ನೆರವು ನೀಡುತ್ತ ಬಂದಿದೆ. ಈ ಬಾರಿ ಮುಂಗಾರು ವಿಳಂಬವಾಗಿರುವ ಹಾಗೆ ಮಹಾರಾಷ್ಟ್ರ ಸರ್ಕಾರ ನೀರು ಬಿಡುವುದನ್ನು ವಿಳಂಬ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೩ ಟಿಎಂಸಿ ನೀರು ಬಿಡುವಂತೆ ಮೇ ೩೧ ರಂದು ಒತ್ತಾಯಿಸಿದ್ದರು. ಒಂದು ಟಿಎಂಸಿ ಬಂದಿತು. ಆದರೆ ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಅಧಿಕಗೊಂಡಿದೆ. ಇನ್ನೂ ೨ ಟಿಎಂಸಿ ನೀರು ಬೇಕಿದೆ ಎಂದು ಕರ್ನಾಟಕ ಸರ್ಕಾರ ಮಹಾರಾಷ್ಟ್ರಕ್ಕೆ ತಿಳಿಸಿದೆ. ಮಹಾರಾಷ್ಟ್ರದಲ್ಲೂ ನೀರಿನ ಕೊರತೆ ಇದೆ. ಪಶ್ಚಿಮ ಘಟ್ಟಗಳಲ್ಲಿ ಮಳೆ ಆರಂಭವಾಗಿಲ್ಲ. ಬೆಳಗಾವಿಯ ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸಚಿವರಾಗಿರುವುದರಿಂದ ಅವರು ತಮ್ಮ ವರ್ಚಸ್ಸು ಬಳಸಿ ನೀರು ತರಬಹುದು. ಮಹಾರಾಷ್ಟ್ರ ಮುಖ್ಯಮಂತ್ರಿ ಅವರಿಗೆ ಆಪ್ತರಾಗಿರುವುದರಿಂದ ನೀರು ತರುವುದು ಕಷ್ಟವಾಗಲಾರದು. ಮಳೆಗಾಲದಲ್ಲಿ ಕೊಯ್ನಾದಿಂದ ಹೆಚ್ಚುವರಿ ನೀರು ಬಿಡುವುದು. ಅದರಿಂದ ಪ್ರವಾಹ ಬರುವುದು ಪ್ರತಿವರ್ಷದ ಸಂಗತಿ. ಬೇಸಿಗೆಯಲ್ಲಿ ನೀರಿನ ಮಟ್ಟ ಕುಸಿಯುತ್ತದೆ. ಇದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ತಲೆದೋರುತ್ತದೆ. ಅದರಲ್ಲೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಬಹಳ ಮುಖ್ಯ. ಈ ಪ್ರದೇಶಗಳಿಗೆ ಕೃಷ್ಣಾ ಮತ್ತು ಭೀಮಾ ನದಿಗಳೇ ಆಶ್ರಯ ನೀಡಬೇಕು. ಎರಡೂ ನದಿಗಳು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವುದರಿಂದ ಮುಂಗಾರು ಆರಂಭ ಬಹಳ ಮುಖ್ಯ. ಈ ಎರಡೂ ನದಿಗಳು ಮಹಾರಾಷ್ಟ್ರ ಕರ್ನಾಟಕ ಮತ್ತು ಆಂಧ್ರ ಹಾಗೂ ತೆಲಂಗಾಣಕ್ಕೆ ಜೀವನದಿಗಳು. ಇವುಗಳನ್ನು ಆಶ್ರಯಿಸಿ ನೂರಾರು ಹಳ್ಳಿಗಳಿವೆ. ಅಲ್ಲಿಯ ಜನ-ಜಾನುವಾರುಗಳಿಗೆ ನೀರು ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಕರ್ನಾಟಕ- ಮಹಾರಾಷ್ಟ್ರ ನಡುವೆ ವಿವಾದ ಈಗಲೂ ನಿಲ್ಲುವ ಸೂಚನೆ ಇಲ್ಲ. ಮಹಾರಾಷ್ಟç ಸರ್ಕಾರ ಮೊದಲಿನಿಂದಲೂ ಕರ್ನಾಟಕದ ಕರೆಗೆ ಓಗೊಟ್ಟು ನೀರು ಬಿಡುವ ಕೆಲಸವನ್ನು ಕೈಗೊಳ್ಳುತ್ತ ಬಂದಿದೆ. ಈಗಲೂ ಅದೇ ಪದ್ಧತಿಯನ್ನು ಮುಂದುವರಿಸಲು ಕರ್ನಾಟಕ ಬಯಸುತ್ತಿದೆ. ಅದರಂತೆ ಕರ್ನಾಟಕದ ಮುಖ್ಯಮಂತ್ರಿ ನೀರು ಬಿಡುವಂತೆ ಮಹಾರಾಷ್ಟ್ರವನ್ನು ಒತ್ತಾಯಿಸಿದ್ದಾರೆ. ನೀರಿನ ವಿಚಾರದಲ್ಲಿ ಎರಡು ರಾಜ್ಯಗಳ ನಡುವೆ ವೈಷಮ್ಯ ಎಂದೂ ಮೂಡಿಲ್ಲ. ಈ ಸೌಹಾರ್ದ ಸಂಬಂಧವೇ ನೀರಿನ ಸಮಸ್ಯೆ ಬಗೆಹರಿಸಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಹಿಂದಿನಿಂದಲೂ ಎರಡೂ ರಾಜ್ಯಗಳ ನಡುವೆ ಸ್ನೇಹ ಸಂಬಂಧಕ್ಕೆ ಧಕ್ಕೆ ಬಂದಿಲ್ಲ. ಗಡಿ ವಿವಾದ ನ್ಯಾಯಾಲಯದಲ್ಲಿದ್ದರೂ ನೀರಿನ ಕೊರತೆ ನಿವಾರಣೆಗೆ ಅಡ್ಡಿ ಬಂದಿಲ್ಲ. ಮಹಾರಾಷ್ಟçದಲ್ಲಿ ರಾಜಕೀಯ ಬದಲಾವಣೆಗಳು ಬಂದ ಮೇಲೆ ಕರ್ನಾಟಕದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ನೀರು ಬಿಡುವುದರಲ್ಲಿ ಸ್ವಲ್ಪ ವಿಳಂಬವಾಗಿದೆ. ಇದು ಬಗೆಹರಿಯದೇ ಇರುವ ಸಮಸ್ಯೆ ಏನಲ್ಲ. ಎರಡೂ ರಾಜ್ಯಗಳ ಜನರ ನಡುವೆ ಇರುವ ದಿನನಿತ್ಯ ಸಂಬಂಧಕ್ಕೆ ಧಕ್ಕೆ ಒದಗಿಬಂದಿಲ್ಲ. ಜನ ರಾಜಕೀಯವೇ ಬೇರೆ ಸ್ನೇಹ ಸಂಬಂಧವೇ ಬೇರೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಜಲ-ಗಡಿ ವಿವಾದಕ್ಕೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಂಚಿಕೊಳ್ಳುವುದಕ್ಕೂ ಸಂಬಂಧವಿಲ್ಲ. ಇದು ಮಾನವೀಯತೆ ಮೇಲೆ ನಡೆಯುವ ವ್ಯವಹಾರ. ಹಿಂದಿನಿಂದಲೂ ಕರ್ನಾಟಕ ಕುಡಿಯುವ ನೀರಿಗೆ ಕೋರಿದಾಗಲೆಲ್ಲಾ ಮಹಾರಾಷ್ಟ್ರ ನೀರು ಬಿಡುವುದಿಲ್ಲ ಎಂದೂ ಹೇಳಿಲ್ಲ. ಈ ಬಾರಿ ಕೂಡ ಕುಡಿಯುವ ನೀರು ದೊರಕುವ ವಿಶ್ವಾಸ ಜನರಲ್ಲಿದೆ.
ಆಲಮಟ್ಟಿ ಮತ್ತು ನಾರಾಯಣಪುರ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ಎರಡು ಜಲಾಶಯಗಳ ನೀರು ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಿಗೆ ಜೀವನಾಡಿಯಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಬೆಂಗಾಡು ಹಚ್ಚ ಹಸಿರನ್ನು ಕಾಣಲು ಕೃಷ್ಣಾ ಮತ್ತು ಭೀಮಾ ನದಿಗಳೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಳ್ಳುತ್ತದೆ. ನದಿಯ ಇಕ್ಕೆಲಗಳಲ್ಲಿರುವ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಹಿಂದೆ ಕೃಷ್ಣಾ ಮತ್ತು ಭೀಮಾದಲ್ಲಿ ಪ್ರವಾಹ ಬಂದಾಗ ಅದನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಈಗ ಹಲವು ಜಲಾಶಯಗಳು ನಿರ್ಮಾಣಗೊಂಡಿರುವುದು ಅನುಕೂಲವಾಗಿದೆ. ಭೀಮಾ ನದಿಗೆ ಹೆಚ್ಚು ಬಾಂದಾರಗಳನ್ನು ನಿರ್ಮಿಸಲಾಗಿದೆ. ಅದರಿಂದ ನೀರು ನಿಲ್ಲಿಸಲು ಸಾಧ್ಯವಾಗಿದೆ. ಇದು ಜನ ಜಾನುವಾರುಗಳಿಗೆ ನೀರು ಒದಗಿಸಲು ಉತ್ತಮ ತಾಣವಾಗಿದೆ. ಈ ಬಾರಿ ಅಲ್ಲಿಯೂ ನೀರಿನ ಮೂಲ ಬತ್ತಿ ಹೋಗಿದೆ. ಹೀಗಾಗಿ ಮಹಾರಾಷ್ಟ್ರ ನೀರು ಬಿಡುವುದು ಅಗತ್ಯವಾಗಿದೆ.