ಚಿಕ್ಕಮಗಳೂರು: ಜಿಲ್ಲೆಯ ಸೋಬಾನೆ, ಭಜನ ಪದ, ಜಾನಪದ ಕಲಾವಿದೆ ಕಡೂರು ತಾಲೂಕು ಚಿಕ್ಕಬಾಸೂರಿನ ಚೌಡಮ್ಮ ಅವರನ್ನು ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೌಡಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಡೂರುತಾಲೂಕು ಬಿಳುವಾಳದ ಚಿಕ್ಕಬಾಸೂರು ಗ್ರಾಮದವರಾದ ಇವರು ರೈತಕುಟುಂಬದ ಗಿಡ್ಡಪ್ಪ ಮತ್ತು ಕರಿಯಮ್ಮ ಎಂಬುವರ ಮಗಳಾಗಿ ಜನಿಸಿದರು. ತಾಯಿ ಜಾನಪದ ಕಲಾವಿದರಾಗಿದ್ದು, ತಾಯಿಯಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಕಲಿತರು. ಅನಕ್ಷರಸ್ಥರಾದ ಇವರು ಕೇವಲ ಜ್ಞಾಪಕಶಕ್ತಿಯಿಂದ ನೂರಾರು ಹಾಡುಗಳನ್ನು ಹಾಡುತ್ತಾರೆ.
ಸೋಬಾನೆ ಪದಗಳನ್ನು ಮದುವೆ ಆರತಾಕ್ಷತೆ, ಮುಂತಾದ ಶುಭಾ ಸಮಾರಂಭಗಳಲ್ಲಿ ಹಾಡುತ್ತಾ ಸೋಬಾನೆ ಚೌಡಮ್ಮ ಎಂದೇ ಖ್ಯಾತಿ ಗಳಿಸಿದ್ದರು. ಗ್ರಾಮೀಣ ಸಂಪ್ರದಾಯವನ್ನು ಬೆಳೆಸುತ್ತಾ ಬಂದಿದ್ದಾರೆ.ಸೋಬಾನೆಪದಗಳನ್ನುಹಾಡುವ ಮೂಲಕ ಬದುಕನ್ನು ಕಟ್ಟಿಕೊಂಡವರು. ಇವರ ಸೋಬಾನೆ ಪದಗಳನ್ನು ಗುರುತಿಸಿದ ಭದ್ರಾವತಿಯ ಆಕಾಶವಾಣಿಯಲ್ಲಿ ಇವರ ಹಾಡುಗಳು ಪ್ರಸರಗೊಂಡಿವೆ. ಆಕಾಶವಾಣಿಯಲ್ಲಿ ಬಿ.ಶ್ರೇಣಿಯ ಕಲಾವಿದೆಯಾಗಿ ಮನ್ನಣೆಗಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಸೋಬಾನೆ ಪದಗಳನ್ನು ತಮ್ಮ ಗ್ರಾಮವಲ್ಲದೆ ಸುತ್ತಮುತ್ತಲ ಹಳ್ಳಿಗಳ ಮಹಿಳೆಯರಿಗೆ ಕಲಿಸುತ್ತಾ ಬಂದಿದ್ದಾರೆ.ಗುರುಶಿಷ್ಯ ಪರಂಪರೆ ಯೋಜನೆಯಡಿ ಸೋಬಾನೆಹಾಡುಗಳನ್ನು ಕಲಿಸಿಕೊಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೋಬಾನೆ, ಭಜನೆ ಪದ, ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇವರ ಈ ಸಾಧನೆಯನ್ನು ಗುರುತಿಸಿ ಈ ವರ್ಷದ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.