ಪ್ರಸ್ತುತ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿ ಸ್ವಾರ್ಥ ಸಾಧನೆಗಾಗಿ ಏನೆನೋ ಅಲ್ಲದ ಕೆಲಸಕ್ಕೆ ಕೈ ಹಾಕಿ ಕೊನೆಗೆ ಸೋಲುಂಟಾದಾಗ ಹತಾಶನಾಗುತ್ತಾನೆ. ಅದೇ ಮನುಷ್ಯ ಸೇವಾ ಮನೋಭಾವನೆ ಹೊಂದಿದ್ದರೆ ತನಗೂ ತನ್ನ ಪರಿವಾರದವರೊಂದಿಗೆ ಇಡೀ ಸಮಾಜಕ್ಕೂ ಒಳ್ಳೆಯದಾಗುತ್ತದೆ.
ಸಮಾಜದ ಒಳ್ಳೆಯದಾಗಬೇಕು ಎಂಬ ಭಾವನೆ ಇಟ್ಟುಕೊಂಡು ಸೇವೆ ಸಲ್ಲಿಸುತ್ತಿದ್ದರೆ ಅವನ ಕೀರ್ತಿಯೂ ಸಂತ ಶರಣರಂತೆ ಶ್ರೇಷ್ಠವಾಗುತ್ತದೆ. ಎಂಬತ್ಕಾಲ್ಕು ಲಕ್ಷ ಜೀವರಾಶಿಗಳಲ್ಲಿ ಮನುಷ್ಯವೆಂಬ ಜೀವಕ್ಕೆ ವಿಶಿಷ್ಟತೆಯನ್ನು ಕಲ್ಪಿಸಿಕೊಟ್ಟಿದ್ದಾನೆ. ಶ್ರೇಷ್ಠವಾದ ಸ್ಥಾನಮಾನವೂ ಇದೆ.
ಎಲ್ಲ ಜೀವರಾಶಿಕ್ಕಿಂತ ಜ್ಞಾನ, ವೈಚಾರಿಕತೆ ಎಂಬ ವಿಶಿಷ್ಟವಾದ ಶಕ್ತಿಯನ್ನು ಭಗವಂತ ದಯಪಾಲಿಸಿದ್ದಾನೆ. ಅದನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಆದರೆ ಕ್ಷಣದ ಸುಖಕ್ಕಾಗಿ ಅನೈತಿಕ ಕರ್ಮಗಳಿಂದ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಲೋಕದ ಶಿಕ್ಷೆಗೂ ಮತ್ತು ಲೋಕನಾಥನ ಶಿಕ್ಷೆಗೂ ಗುರಿಯಾಗುತ್ತಿದ್ದೇವೆ. ಅಜ್ಞಾನಿಗೆ ಅಹಂಕಾರ ಬರುತ್ತದೆ. ಸುಜ್ಞಾನಿಕಗೆ ಸಹಕಾರ ಭಾವನೆ ಬರುತ್ತದೆ. ಹಿರಿಯರು ಹೇಳಿದ ಹಾಗೇ ಜಾಣ ಜಾಣರಿಗೆ ಮೂರು ಹಾದಿ ಜಾಣ ಕೋಣನಿಗೆ ಎರಡು ಹಾದು ಕೋಣ ಕೋಣರಿಗೆ ಒಂದೇ ಹಾದು ಎನ್ನುವಂತೆ ಬುದ್ಧಿವಂತಿಕೆಯಿಂದ ಜೀವನದಲ್ಲಿ ಶಿಸ್ತು, ಸಹನೆ, ಔದಾರ್ಯತೆ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಮನುಷ್ಯ ತನ್ನ ಜೀವನದಲ್ಲಿ ವಿಚಲಿತನಾಗಬಾರದು ಎಂದು ಪರಮಾತ್ಮ ಈ ಭೂಮಿಯ ಮೇಲೆ ಅನೇಕ ಅವತಾರಿ ಪುರುಷರನ್ನು ಸೂಫೀ ಸಂತರನ್ನು ಶರಣರುತತ್ವಜ್ಞಾನಿಗಳನ್ನು ಪ್ರತಿಯುಗದಲ್ಲಿಯೂ ಜನ್ಮ ನೀಡುತ್ತಾನೆ. ಮನುಷ್ಯನಿಗೆ ಮಾನವೀಯ ಮೌಲ್ಯದ ಜತೆಗೆ ಹೇಗೆ ಪ್ರಪಂಚದೊಂದಿಗೆ ಪಾರಮಾರ್ಥ ಕಾಣಬೇಕು ಎಂದು ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಮೊದಲಿನ ಸಂತರು ಶರಣರು ಸಮಾಜಕ್ಕಾಗಿ ಮನುಕುಲದ ಉದ್ಧಾರಕ್ಕಾಗಿ ತಮ್ಮ ಇಡೀ ಆಯುಷ್ಯ ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ.
ಒಬ್ಬ ಸೂಫಿ ಸಂತನ ಹತ್ತಿರ ಒಬ್ಬ ಮಹಿಳೆ ತನ್ನ ಮೂರು ವರ್ಷದ ಕುಸು ತೆಗೆದುಕೊಂಡು ಬಂದು ನನ್ನ ಮಗನಿಗೆ ನೋವಿದೆ. ಪರಿಹಾರವಾಗುವಂತೆ ಆಶೀರ್ವಾದ ಮಾಡಿ ಎಂದು ಕೇಳಿದಾಗ ಸಂತರು ಆ ಮಗುವನ್ನು ನೋಡಿ ಅಮ್ಮಾ ನಾಳೆ ಮಗುವನ್ನು ಕರೆದುಕೊಂಡು ಬಾ ಎಂದು ಹೇಳುತ್ತಾರೆ. ಇದೇ ರೀತಿ ಮೂರು ದಿನಗಳ ಕಾಲ ಹೇಳುತ್ತಾರೆ. ಇದೇ ರೀತಿ ನಾಲ್ಕನೇ ದಿನ ಅಮ್ಮ ನಿಮ್ಮ ಮಗು ಬೆಲ್ಲ ತಿನ್ನುತ್ತಾನೆ. ಬೆಲ್ಲ ಕೊಡಬೇಡ ಎಂದು ಹೇಳಿದರು. ಅದಕ್ಕೆ ಇದೇ ಪ್ರಶ್ನೆ ಹಾಕಿದಾಗ ಆಗ ಅವರು ಹೇಳಿದ್ದೇನೆಂದರೆ ನಾನು ಮೊದಲು ಬೆಲ್ಲ ತಿನ್ನುತ್ತಿದ್ದೆ ಅದಕ್ಕೆ ಹೇಳಲಿಲ್ಲ. ತಾನು ಮೊದಲು ಮಾಡಿದಾಗ ಮತ್ತೊಬ್ಬರಿಗೆ ಹೇಳಲು ಅರ್ಹತೆ ಬರುತ್ತದೆ. ಇಲ್ಲವಾದಲ್ಲಿ ಅಲ್ಲಾಹನ ಎದರು ಅಪರಾಧಿಗಳಾಗುತ್ತೇವೆ ಎಂದು ಹೇಳುತ್ತಾರೆ. ಇಂಥ ಮಹಾಜ್ಞನುಗಳು ಮನುಕುಲದ ಮಾರ್ಗದರ್ಶನಕ್ಕಾಗಿಯೆ ಭಗವಂತ ಕಳಿಸಿರುತ್ತಾನೆ. ಇದನ್ನು ಅರ್ಥ ಮಾಡಿಕೊಂಡು ನಾವು ಸಮಾಜಕ್ಕೆ ಪರೋಪಕಾರಿಯಾಗಿ ಬದುಕಬೇಕಾದರೆ ಸೇವಾ ಮನೋಭಾವನೆ ಹೊಂದಬೇಕು.