ರಾಣೇಬೆನ್ನೂರು :- ಪಂಚಮಸಾಲಿ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 2ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಕೂಡಲ ಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.
ನಗರದ ನಾಗಶಾಂತಿ ಉನ್ನತಿ ಪಿಯು ಕಾಲೇಜಿನಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರ ಕುರಿತು ಶಿಗ್ಗಾವಿಯ ಸಿಎಂ ಮನೆ ಎದುರು ಧರಣಿ ನಡೆಸುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾತನಾಡಿ, ಸಮಾಜಕ್ಕೆ ಮೀಸಲಾತಿ ನೀಡಿಕೆ ವಿಚಾರ ಕುರಿತು ವಿಧಾನ ಸಭೆಯಲ್ಲಿ ಶಾಸಕ ಬಸನಗೌಡ ಪಾಟಿಲ ಯತ್ನಾಳ ಪ್ರಸ್ತಾಪಿಸಿದಾಗ ಅದನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಇಂದಿನವರೆಗೂ ಬೇಡಿಕೆ ಈಡೇರಿಸಿಲ್ಲ. ಅದಕ್ಕಾಗಿ ಸೆ.20ರಂದು ಶಿಗ್ಗಾವಿಯ ಮುಖ್ಯಮಂತ್ರಿ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಿಯೇ ತಿರುತ್ತೆವೆ. ರಾಣೇಬೆನ್ನೂರು ತಾಲೂಕಿನ ಸಮಾಜ ಬಾಂಧವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹೋರಾಟ ಯಶಸ್ವಿ ಮಾಡಬೇಕು ಎಂದರು.