ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಹಾಗೂ ಅದರ ಬುದ್ಧಿ ಎರಡೂ ಹ್ಯಾಕ್ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್‌ನಲ್ಲಿ ಮಹಿಳೆಯರಿಗೆ ಫ್ರೀ ಅನ್ನೋ ವಿಚಾರ ಬಿಟ್ಟರೆ ಉಳಿದ ಎಲ್ಲಾ ವಿಚಾರದಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅಕ್ಕಿ ಕೊಡುತ್ತಿರುವುದು ಮೋದಿಯವರು. ಆದರೆ, ಕೆಲವರು ಯುಪಿಎ ಈ ಕಾನೂನು ಮಾಡಿದ್ದು ಎನ್ನುತ್ತಿದ್ದಾರೆ. ಅವರು ಯಾವ ಕಾನೂನು ರೂಲ್ಸ್ ಮಾಡಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಇಂಪ್ಲಿಮೆಂಟ್ ಮಾಡಿ ರೂಲ್ಸ್ ಮಾಡಿದ್ದೇವೆ. ದೇಶದ ೮೦ ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಅಲ್ಲದೆ, ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಈಗ ಬರಗಾಲ ಆವರಿಸುತ್ತಿದೆ. ಇದರಿಂದ ಭತ್ತದ ಕೊರತೆ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಇಂತಹ ನೈಸರ್ಗಿಕ ವಿಕೋಪಗಳು ಆದಾಗ ಅಕ್ಕಿ ಬೇಕು. ಕೇಂದ್ರದಲ್ಲಿ ಅಕ್ಕಿ ಸ್ಟಾಕ್ ಇದೆ ಅನ್ನೋದು ಶುದ್ಧ ಸುಳ್ಳು. ೧೦ ಕೆಜಿ ಅಕ್ಕಿ ಎಂದು ಭಾಷಣ ಮಾಡಿದವರು, ಯಾವಾಗಲೂ ಭಾರತ ಸರ್ಕಾರದ ಹೆಸರು ಹೇಳಲಿಲ್ಲ. ಎಲ್ಲಾ ನಿರುದ್ಯೋಗಿಗಳಿಗೆ ದುಡ್ಡು ಎಂದು ಕಾಂಗ್ರೆಸ್ ಹೇಳಿತ್ತು. ಈಗ ಏನಾಗುತ್ತಿದೆ. ಈಗಾಗಲೇ ಜನ ಕಾಂಗ್ರೆಸ್‌ನ ಸುಳ್ಳುಗಳಿಂದ ಭ್ರಮನಿರಸನಗೊಂಡಿದ್ದಾರೆ ಎಂದರು.
ಲುಂಗಿ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಜೋಶಿ, ಇದು ಕಾಂಗ್ರೆಸ್‌ನ ಲೋ ಲೆವೆಲ್ ಭಾಷೆಯಾಗಿದೆ. ಈ ಬಗ್ಗೆ ನಮ್ಮ ಪಕ್ಷದ ಅನೇಕರು ಮಾತಾಡಿದ್ದಾರೆ. ಸಿದ್ದರಾಮಯ್ಯ ಲುಂಗಿ ಲೀಡರ್ ಎಂಬುದನ್ನು ಮರೆಯಬಾರದು. ನಮಗೂ ಆ ರೀತಿ ಭಾಷೆ ಬಳಸಲು ಬರುತ್ತದೆ. ಆದರೆ, ಅದು ಸಭ್ಯತೆ ಅಲ್ಲ. ಅದನ್ನೆಲ್ಲ ಬಿಟ್ಟು ವಿದ್ಯುತ್ ವಿಚಾರವಾಗಿ ಸರ್ಕಾರ ಗಮನಹರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮುನಿಯಪ್ಪ ಇದೇ ತಿಂಗಳು ಅಕ್ಕಿ ಜೊತೆ ದುಡ್ಡು ಕೊಡುವುದಾಗಿ ಹೇಳಿದ್ದರು ಅದು ಏನಾಯಿತು ಎಂದು ಪ್ರಶ್ನಿಸಿದರು. ಇದರ ವಿರುದ್ಧ ಯಡಿಯೂರಪ್ಪ ನೇತೃತ್ವದಲ್ಲಿ ಜು.೪ ರಂದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.