ಹುಬ್ಬಳ್ಳಿ: ತಂದೆಯೇ ಮಗನ ಕೊಲೆಗೆ ಸುಪಾರಿ ನೀಡಿ ಕೊಲೆ ಮಾಡಿದ ಪ್ರಕರಣದಲ್ಲಿ ಕೊಲೆಯಾದ ಅಖಿಲ್ ಮಹಾಜನಶೇಠ್ ಮೃತ ದೇಹ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಪತ್ತೆಯಾಗಿದೆ.
ಅಖಿಲ್ ಕಾಣೆಯಾದ ದೂರು ದಾಖಲಾದ ಮೇಲೆ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಇದೊಂದು ಸುಪಾರಿ ಕೊಲೆಯೆಂದು ಸಂಶಯ ವ್ಯಕ್ತವಾಗಿತ್ತು. ಅದರ ಆಧಾರದ ಮೇಲೆ ತಂದೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಇದಾದ ಮೇಲೆ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಶವ ಪತ್ತೆಯಾಗಿರಲಿಲ್ಲ. ಪೊಲೀಸರ ತೀವ್ರ ಹುಡುಕಾಟದ ನಂತರ ಸುಪಾರಿ ಪಡೆದಿದ್ದ ಎನ್ನಲಾದ ಆರೋಪಿಯ ಕಲಘಟಗಿ ತಾಲೂಕಿನ ದೇವಿಕೊಪ್ಪದ ನಿರ್ಮಾಣ ಹಂತದ ತೋಟದ ಮನೆಯ ಹತ್ತಿರ ಶವ ಪತ್ತೆಯಾಗಿದೆ.
ಡಿಸೆಂಬರ್ 1 ರಂದು ಅಖಿಲ್ ನನ್ನು ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಕಲಘಟಗಿ ಹತ್ತಿರ ಕೊಲೆ ಮಾಡಿರುವ ಕುರಿತು ಎಫ್ಐಆರ್ ದಾಖಲಾಗಿತ್ತು. ಶವ ಮಾತ್ರ ಇದುವರೆಗೂ ಸಿಕ್ಕಿರಲಿಲ್ಲ. ಈಗ ಶವ ಸಿಕ್ಕಿದ್ದು, ತನಿಖೆಯ ನಂತರ ಕೊಲೆಯ ಪೂರ್ವಾಪರ ತಿಳಿಯಲಿದೆ.