ವೈದ್ಯ ವೃತ್ತಿಯನ್ನು ಪಕ್ಕಕ್ಕಿಟ್ಟು ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಡಾ.ರೋಹಿಣಿ ಮೋಹನ್ ಸುಗಮ ಸಂಗೀತ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ ೪೨ ವರ್ಷಗಳಿಂದ ಕರ್ನಾಟಕದಾದ್ಯಂತ ಅಲ್ಲದೇ ಮುಂಬೈ, ದೆಹಲಿಗಳಲ್ಲಿ ಸುಗಮ ಸಂಗೀತ ಕರ‍್ಯಕ್ರಮಗಳನ್ನು ನೀಡಿರುವ ಡಾ.ರೋಹಿಣಿ ಸುಗಮ ಸಂಗೀತ ಕ್ಷೇತ್ರದ ಮಿನುಗು ನಕ್ಷತ್ರ.
ತಮ್ಮ ೬ನೇ ವಯಸ್ಸಿನಲ್ಲೇ ವೇದಿಕೆಯನ್ನೇರಿದ ಡಾ.ರೋಹಿಣಿ ಮೋಹನ್, ೫ ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯವನ್ನು ಎನ್.ಲಕ್ಷ್ಮೀಯವರಲ್ಲಿ ಕಲಿತು, ಸಂಗೀತ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ನಂತರದ ದಿನಗಳಲ್ಲಿ ಕರ್ನಾಟಕದ ಪ್ರಖ್ಯಾತ ಸುಗಮ ಸಂಗೀತ ಗಾಯಕಿ ಎಚ್.ಆರ್. ಲೀಲಾವತಿಯವರ ಗರಡಿಯಲ್ಲಿ ಸುಮಾರು ೧೨ ವರ್ಷಕ್ಕೂ ಹೆಚ್ಚು ಸುಗಮ ಸಂಗೀತ ಕಲಿತಿರುವ ಅವರು ಹಿಡಿದ ಕೆಲಸದಲ್ಲಿ ಶ್ರದ್ಧೆಯೊಂದಿಗೆ ಪಕ್ವವಾಗುವ ವರೆಗೂ ಬಿಡದ ಛಲವಾದಿ. ಅಷ್ಟೇ ಏಕೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕುಶಲಾ ಜಗನ್ನಾಥರ ಬಳಿ ಕಲಿತಿದ್ದಾರೆ.
ಮನೆತನದಲ್ಲಿ ಸಂಗೀತದ ಅಲೆ ಇದ್ದುದ್ದರಿಂದ ರೋಹಿಣಿಯವರಿಗೆ ಆಸಕ್ತಿ ಸಹಜವಾಗಿ ಬಂದಿತ್ತು. ತಾತ ಅಮಲ್ದಾರ್ ಪುಟ್ಟಸ್ವಾಮಯ್ಯನವರು ಆ ಕಾಲದಲ್ಲಿ ಶಾಸ್ತ್ರೀಯ ಸಂಗೀತಗಾರರಾಗಿದ್ದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ರೋಹಿಣಿ ಮೋಹನ್ ತಂದೆ ದಿ.ನಾಗರಾಜ್‌ಎಂ.ಎಸ್, ತಾಯಿ ದಿ.ಅನಸೂಯ.
೧೯೭೯-೮೦ರ ಸಾಲಿನಲ್ಲಿ ಕುಟುಂಬ ಕಲ್ಯಾಣದ ಬಗ್ಗೆ ತಿಳಿವಳಿಕೆ ನೀಡುವ ಹಾಡುಗಳನ್ನು ಹಾಡಿ ಕರ‍್ಯಕ್ರಮವನ್ನು ಚೆಂದಗಾಣಿಸಿದರು. ವಾರ್ತಾ ಮತ್ತು ಪ್ರಚಾರ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ೧೯೭೯ರಲ್ಲಿ ಆಕಾಶವಾಣಿಯಲ್ಲಿ ಯುವಕಲಾವಿದೆಯಾಗಿ ಸೇರ್ಪಡೆಗೊಂಡು ಎ' ದರ್ಜೆ ಪಡೆದು, ಸುಮಾರು ೩೫ ವರ್ಷಗಳಿಂದ ಕಾರ್ಯಕ್ರಮಗಳನ್ನು ನೀಡಿ ಶ್ರೋತೃಗಳ ಮನಗೆದ್ದಿದ್ದಾರೆ. ಧ್ವನಿಸುರುಳಿಗಳಲ್ಲೂ ತಮ್ಮ ಕಂಠಸಿರಿಯನ್ನು ಮೊಳಗಿಸಿರುವ ರೋಹಿಣಿಯವರು ಹಲವು ತಮ್ಮದೇ ಭಕ್ತಿ-ಭಾವಧ್ವನಿ ಸುರುಳಿಗಳು ಹಾಗೂ ಸಿಡಿಗಳನ್ನು ಹೊರತಂದಿದ್ದಾರೆ. ವಿದೇಶಗಳಲ್ಲೂ ಇವರ ಧ್ವನಿ ಜನಪ್ರಿಯ. ವಿಶೇಷವೆಂದರೆ, ರಾಷ್ಟ್ರಕವಿ ಕುವೆಂಪುರವರು ರೋಹಿಣಿಯವರ ಭಾವಪೂರ್ಣ ಹಾಡುಗಾರಿಕೆಯನ್ನು ಮೆಚ್ಚಿ ತಮ್ಮ ಕೃತಿಗಳನ್ನು ವಾದ್ಯದ ಸಹಕಾರವಿಲ್ಲದೇ ಒಂದು ಕ್ಯಾಸೆಟ್‌ನಲ್ಲಿ ಹಾಡಿಕೊಡಬೇಕೆಂದು ಸ್ವತಃ ಕೇಳಿ ಪಡೆದುಕೊಂಡಿದ್ದರು. ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ೧೯೯೯-೨೦೦೦ನೆ ಸಾಲಿನಲ್ಲಿ
ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೦೦ನೇ ಇಸವಿಯಲ್ಲಿ ಆರ್ಯಭಟ ಸಂಸ್ಥೆಯವರು ಆರ್ಯಭಟ ರಜತ ಮಹೋತ್ಸವ ಪ್ರಶಸ್ತಿ' ಹಾಗೂ ೨೦೧೪ರಲ್ಲಿ
ನಾಡ ಪ್ರಭುಕೆಂಪೇಗೌಡ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳು ಕೊಡುಮಾಡುವ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿದೆ.
ರೋಹಿಣಿ ೬೦ರ ಹೊಸ್ತಿಲಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನಲ್‌ನಲ್ಲಿ ಕಗ್ಗದಯಾನ-ವಾಚನ, ವಿಶ್ಲೇಷಣೆ ಮತ್ತು ವಿಷಯ ಮಂಡನೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದು ೬೦ ಸಂಚಿಕೆಗಳನ್ನು ಪೂರೈಸುವ ಹಂತದಲ್ಲಿದ್ದಾರೆ.
“ಇಂದೂ-ರೋಹಿಣಿ” ಸುಗಮ ಸಂಗೀತ ಸಂಗೀತ ಟ್ರಸ್ಟ್(ರಿ)ನ್ನು ಸ್ಥಾಪಿಸಿದ ಇವರು ಟ್ರಸ್ಟ್ ವತಿಯಿಂದ ಅನೇಕಾನೇಕ ಕರ‍್ಯಕ್ರಮಗಳ ರುವಾರಿಯೂ ಹೌದು.
ರೋಹಿಣಿ ಅವರಲ್ಲಿನ ವಿಶೇಷತೆ ಅಂದರೆ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗವನ್ನು ಸರಾಗವಾಗಿ ಹಾಡುವುದು ಹಾಗೂ ಕಗ್ಗದ ಕುರಿತು ತರಬೇತಿ ನೀಡುವುದು. ಪತಿ ಶ್ರೀರಾಮ್ ಮೋಹನ್, ಪುತ್ರಿ ಸುರಭಿ ಮೋಹನ್, ಪುತ್ರ ಸೌರಭ ಮೋಹನ್ ಅವರ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಮಹದಾಸೆ ಅವರದು.
– ಸಂಧ್ಯಾ ಅಜಯ್‌ಕುಮಾರ್