`ಸಿಬ್ಬಂದಿ ಶಾಶ್ವತ ಹಂಚಿಕೆ ನಿಯಮ’ ತಂದ ಸಂಕಷ್ಟ

ಬಸ್
Advertisement

ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಲ್ಲಿ ಈಗ ಆತಂಕ, ಗೊಂದಲ ಸೃಷ್ಟಿಯಾಗಿದೆ. ಸಚಿವ ಸಂಪುಟ ಅಂಗೀಕಾರ ನೀಡಿರುವ `ಸಿಬ್ಬಂದಿ ಶಾಶ್ವತ ಹಂಚಿಕೆ ನಿಯಮ’ ವನ್ನು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅನುಷ್ಠಾನಗೊಳಿಸುವ ಹಂತದಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಬಲಾಢ್ಯಗೊಳ್ಳಲಿದೆ. ಆದರೆ, ಸಿಬ್ಬಂದಿ ಮತ್ತು ಮೂರು ನಿಗಮಗಳು ಸಂಕಷ್ಟಕ್ಕೊಳಗಾಗಲಿವೆ.
ಇದಕ್ಕೆ ಅಸ್ಪಷ್ಟ ಮತ್ತು ಅವೈಜ್ಞಾನಿಕ ಶಾಶ್ವತ ಹಂಚಿಕೆಯ ಅಮಾನವೀಯ ನಿಯಮವೇ ಕಾರಣವೆಂಬುದು ಆರೋಪವಾಗಿದೆ. ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಥವಾ ೧೦-೧೫ ವರ್ಷ ಕೆಲಸ ನಿರ್ವಹಿಸಿದ ಅಧಿಕಾರಿಗಳು ಹೊಟ್ಟೆಪಾಡಿಗಾಗಿ ಬೇರೆ ನಿಗಮಕ್ಕೆ ಹೋಗಲೇಬೇಕಾಗಿದೆ. ಆದರೆ, ಬೆಂಗಳೂರು ಕೇಂದ್ರ ಕಚೇರಿಯಲ್ಲಿದ್ದವರು ಇತರೆ ನಿಗಮಕ್ಕೆ ಬರುವ ಸಾಧ್ಯತೆ ಕಡಿಮೆ. ಈ ಒಂದು ನಿಯಮಾವಳಿಯ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಕೋಲಾಹಲ ಉಂಟಾದರೆ, ನಿಗಮದ ನಿರ್ದೇಶಕರುಗಳು, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಈ ಕುರಿತು ಬಿಗಿ ಪಟ್ಟು ಹಿಡಿದುಕೊಂಡಿದ್ದಾರೆ.
ಏನಿದು ಶಾಶ್ವತ ಹಂಚಿಕೆ ನಿಯಮ?
ನಿಗಮದ ವ್ಯವಸ್ಥಾಪಕರ ನಿರ್ದೇಶಕರ ವೃಂದ ನಿರ್ವಹಣೆ ಪ್ರಾಧಿಕಾರದಡಿ ಕರ್ತವ್ಯ ನಿರ್ವಹಿಸುತ್ತಿರುವ ದರ್ಜೆ-೩ ಮೇಲ್ವಿಚಾರಕ ಸಿಬ್ಬಂದಿ, ದರ್ಜೆ-೨ ಹಾಗೂ ದರ್ಜೆ ೧ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ನಾಲ್ಕು ನಿಗಮಗಳಿಗೆ (ವಾಕರಸಾಸಂ, ಈಶಾನ್ಯ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ) ಶಾಶ್ವತ ಹಂಚಿಕೆ ಮಾಡುವ ನಿಯಮ ಜಾರಿಯಾಗುತ್ತಿದೆ. ಇದು ಬೆರಳೆಣಿಕೆಯಷ್ಟು ಅಧಿಕಾರಿಗಳಿಗೆ ಸಂತಸ ತಂದರೆ ಇನ್ನೂ ಹಲವಾರು ಅಧಿಕಾರಿಗಳು ಅನಿವಾರ್ಯವಾಗಿ ತಮ್ಮಿಷ್ಟದ ಕೆಲಸದ ಸ್ಥಳ ತೊರೆಯುವ ಪರಿಸ್ಥಿತಿ ಎದುರಾಗಿದೆ.
ಸಂಬAಧಪಟ್ಟ ಹುದ್ದೆಯಲ್ಲಿರುವ ನಾಲ್ಕು ನಿಗಮದಲ್ಲಿನ ಅಧಿಕಾರಿಗಳನ್ನು ಶಾಶ್ವತ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.
ಇದರಿಂದ ಹಿರಿಯ ಶ್ರೇಣಿಯ ಅಧಿಕಾರಿಗಳು ತಮ್ಮಿಷ್ಟದ ತಮ್ಮ ಊರಿನ ಹತ್ತಿರದ ಸ್ಥಳಗಳಿಗೆ ಶಾಶ್ವತವಾಗಿ ವರ್ಗಾವಣೆ ಪಡೆದುಕೊಳ್ಳಲಿದ್ದಾರೆ. ಆದರೆ, ಕಿರಿಯ ಅಧಿಕಾರಿಗಳು ತಮಗೆ ಇಷ್ಟವಿಲ್ಲದಿದ್ದರೂ ಎಲ್ಲಿಗೆ ಸ್ಥಳ ಬರುತ್ತದೆಯೋ ಅಲ್ಲಿಗೆ ತೆರಳಬೇಕಾಗಿದೆ! ಹೀಗಾಗಿ, ಹಲವು ಅಧಿಕಾರಿಗಳು ಗೊಂದಲಕ್ಕೀಡಾಗಿದ್ದು, ನಿವೃತ್ತಿಯ ಅಂಚಿನಲ್ಲಿರುವ ನೌಕರರು ಕುಟುಂಬ ಸಮೇತ ಮತ್ತೆಲ್ಲಿಗೊ ದೂರದ ಸ್ಥಳಕ್ಕೆ ತೆರಳಬೇಕಾಗುತ್ತಿದ್ದು, ಇದರಿಂದ ಅವರು ಆತಂಕಕ್ಕೀಡಾಗಿದ್ದಾರೆ.
ನೌಕರರಿಗೆ ಬಿಸಿತುಪ್ಪವಾದ ಆದೇಶ…….
ಅಧಿಕಾರಿಗಳು ಮತ್ತು ಸಿಬ್ಬಂದಿ ಹೇಳುವ ಪ್ರಕಾರ ಇದು ಸಂಪೂರ್ಣ ಅವೈಜ್ಞಾನಿಕ. ನಾಲ್ಕೂ ನಿಗಮದಲ್ಲಿ ಸುಸೂತ್ರವಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ಕಿರಿಕಿರಿಯಾಗಲಿದೆ. ಮಾನಸಿಕ ನೆಮ್ಮದಿ ಹಾಳಾಗಲಿದೆ. ಎಲ್ಲೊ ಶೇ. ೧ರಷ್ಟು ಜನರಿಗೆ ಅನುಕೂಲವಾಗಬಹುದು ಅಷ್ಟೇ ಎಂದು ಸರ್ಕಾರದ ಆದೇಶದ ಬಗ್ಗೆ ಕೆಂಡ ಕಾರುತ್ತಿದ್ದಾರೆ.
ನಾಲ್ಕು ನಿಗಮಗಳಿಂದ ೨೪೬೧ ಅಧಿಕಾರಿಗಳ ಅರ್ಜಿ:
ನಿಗಮದ ವೆಬ್‌ಸೈಟ್‌ನಲ್ಲಿ ಶಾಶ್ವತ ವರ್ಗಾವಣೆಗೆ ಒಟ್ಟು ೨೪೬೧ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಹುದ್ದೆಯ ಲಭ್ಯತೆ ಹಾಗೂ ಅವರು ಹೊಂದಿದ ಹುದ್ದೆಯ ಸೇವಾ ಜೇಷ್ಠತೆಯಾಧಾರದ ಮೇಲೆ ವಿವಿಧ ನಿಗಮಗಳಿಗೆ ಹಂಚಿಕೆ ಸೂಚಿಸಲಾಗಿದೆ.

ನಿಗಮಗಳನ್ನೇ ವಿಲೀನ ಮಾಡಲಿ
ಶಾಶ್ವತ ವರ್ಗಾವಣೆಯಿಂದ ಕೆಲವರಿಗೆ ಮಾತ್ರ ಸಂತೋಷವಾಗಲಿದೆ. ಹಿರಿಯ ಅಧಿಕಾರಿಗಳಿಗೆ ಕೇಳಿದ ಸ್ಥಳ ಸಿಗುತ್ತದೆ. ಆದರೆ, ಕಿರಿಯರಿಗೆ ತೊಂದರೆಯಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ಮಾನದಂಡಗಳನ್ನು ಅನುಸರಿಸಿ ಹಂಚಿಕೆ ಮಾಡಬೇಕು. ಈ ರೀತಿ ವರ್ಗಾವಣೆ ಮಾಡುವುದಕ್ಕಿಂತ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನ ಮಾಡಬೇಕು. ಕೂಡಲೇ ಈ ವರ್ಗಾವಣೆಯನ್ನು ಕೈಬಿಡಬೇಕು.
ಆರ್.ಎಫ್. ಕವಳಿಕಾಯಿ | ಕಾರ್ಯಾಧ್ಯಕ್ಷರು, ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವಕರ‍್ಸ್ ಫೆಡರೇಷನ್.

ಸರ್ಕಾರದ ತೀರ್ಮಾನ, ಪಾಲನೆ ಅವಶ್ಯ
ಯಾವುದೇ ಅಧಿಕಾರಿಗಳಿಗೂ ಶಾಶ್ವತ ವರ್ಗಾವಣೆಯಲ್ಲಿ ಅನವಶ್ಯಕವಾಗಿ ವರ್ಗಾವಣೆ ಮಾಡುತ್ತಿಲ್ಲ. ಸರಕಾರದ ತೀರ್ಮಾನವಾಗಿರುವುದರಿಂದ ಎಲ್ಲರೂ ಪಾಲನೆ ಮಾಡಬೇಕು. ಇದರ ಜೊತೆಗೆ ಯಾರಿಗಾದರೂ ತೊಂದರೆಯಾಗುತ್ತಿದ್ದಲ್ಲಿ ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ವ್ಯವಸ್ಥಿತವಾದ ಕ್ರಮ ಕೈಗೊಳ್ಳಲಿದೆ.
ಡಾ. ಬಸವರಾಜ ಕೇಲಗಾರ | ಅಧ್ಯಕ್ಷರು , ವಾಕರಸಾ

ವಾಕರಸಾಸಂಸ್ಥೆಗೆ ಸಿಬ್ಬಂದಿ ಕೊರತೆ ಆಗಲಿದೆ
ನಿಗಮದ ವ್ಯವಸ್ಥಾಪಕರ ನಿರ್ದೇಶಕರ ವೃಂದ ನಿರ್ವಹಣೆ ಪ್ರಾಧಿಕಾರದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದರ್ಜೆ-೩ ಮೇಲ್ವಿಚಾರಕ ಸಿಬ್ಬಂದಿಗಳು, ದರ್ಜೆ-೨ ಹಾಗೂ ದರ್ಜೆ ೧ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ವಿವಿಧ ನಿಗಮಗಳಿಗೆ ಶಾಶ್ವತ ಹಂಚಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಈಗಾಗಲೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ತಿಳಿಸಲು ಅವಕಾಶ ನೀಡಲಾಗಿದೆ. ಇದರಿಂದ ಸಿಬ್ಬಂದಿ ಕೊರತೆಯಾಗಲಿದ್ದು, ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
ಭರತ್ ಎಸ್ | ಎಂ.ಡಿ., ವಾಕರಸಾ ಸಂಸ್ಥೆ.