ರಾಣೇಬೆನ್ನೂರ: ಹುಬ್ಬಳ್ಳಿ ಸಿದ್ಧಾರೂಢ ಮಹಾರಾಜರು ತಮ್ಮ ಜೀವನದುದ್ದಕ್ಕೂ ತಪಸ್ವಿಯ ಶೈಲಿಯಲ್ಲಿ ಬದುಕಿದವರು. ಜಾತಿ ಪದ್ದತಿ ಖಂಡಿಸಿ ಮತ್ತು ಅಸ್ತಿತ್ವದಲ್ಲಿರುವ ಎಲ್ಲದರಲ್ಲೂ ದೈವತ್ವವನ್ನು ಕಲ್ಪಿಸಿದವರು ಎಂದು ದಾವಣಗೆರೆಯ ಜಡಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ತಾಲೂಕಿನ ಸುಕ್ಷೇತ್ರ ಮಾಕನೂರ ಗ್ರಾಮದಲ್ಲಿ ಸದ್ಗುರು ಸಿದ್ಧಾರೂಢ ಸ್ವಾಮೀಜಿಯವರ ಜಯಂತಿ ಅಂಗವಾಗಿ ಚತುರ್ಥ ವೇದಾಂತ ಪರಿಷತ್ ಹಾಗೂ ಸದ್ಗುರು ಸಿದ್ಧಾರೂಢ ಸ್ವಾಮೀಜಿಗಳ ಅಮೃತ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ನಾಗರಾಜಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದ ತ್ರಿಮೂರ್ತಿಗಳಲ್ಲೊಬ್ಬರಾದ ಶಿವನ ರೂಪದಲ್ಲಿ ಪ್ರಜ್ವಲಿಸಿದ ಸಿದ್ಧಾರೂಢರ ಜೀವನ ಚರಿತ್ರೆಯನ್ನು ಸರ್ವರೂ ಮೆಲುಕು ಹಾಕಬೇಕು ಎಂದರು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಸದ್ಗುರು ಸಿದ್ಧಾರೂಢರು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ಅಧ್ಯಾತ್ಮಿಕ ಗುರುವನ್ನು ಹುಡುಕುವ ಗುರಿ ಹೊಂದಿ ಜೀವನದಲ್ಲಿ ಬರುವ ಎಲ್ಲ ಕಷ್ಟ-ಕಾರ್ಪಣ್ಯಗಳನ್ನು ಸಹಿಸಿ ಎಲ್ಲರಿಗೂ ಒಳಿತನ್ನು ಬಯಸಿದ ಮಹಾಪುರುಷರು ಅವರಾಗಿದ್ದರು ಎಂದರು.