ಧಾರವಾಡ: ೩೧ ವರ್ಷದ ಹಿಂದಿನ ಕೇಸ್‌ನ್ನು ಮತ್ತೆ ಓಪನ್ ಮಾಡಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ೧೯೯೨ರಲ್ಲಿ ರಾಮಮಂದಿರಕ್ಕಾಗಿ ಹುಬ್ಬಳ್ಳಿಯಲ್ಲಿ ಹೋರಾಟ ನಡೆದಿತ್ತು. ಆ ಸಮಯದಲ್ಲಿ ಕೆಲವು ಕೇಸ್‌ಗಳು ಆಗಿದ್ದವು. ಆದರೆ ಈಗ ಅದನ್ನು ರೀಓಪನ್ ಮಾಡಿಸುವ ಮೂಲಕ ಕಾಂಗ್ರೆಸ್ ದುಷ್ಕೃತ್ಯ ಮೆರೆಯುತ್ತಿದೆ ಎಂದು ಹರಿಹಾಯ್ದರು.
ಈ ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ಗಲಾಟೆ ಆಗಿತ್ತು. ಅವರನ್ನೆಲ್ಲ ಇವರು ಖುಲಾಸೆ ಮಾಡುತ್ತಾರೆ. ಆದರೆ ೩೧ ವರ್ಷದ ಹಿಂದಿನ ಕೇಸ್‌ನ್ನು ಅನಾವಶ್ಯಕವಾಗಿ ಓಪನ್ ಮಾಡಿದ್ದಾರೆ ಎಂದರು.
ಒಬ್ಬ ಆಟೋ ಓಡಿಸಿ ಜೀವನ ನಡೆಸುವಾತ. ಅಂತಹ ಬಡವನ ಮೇಲಿನ ಕೇಸ್ ಓಪನ್ ಮಾಡಿಸಿದ್ದಾರೆ. ವಯಸ್ಸಾದವರ ಬಂಧನ ಮಾಡಿದ್ದಾರೆ. ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಇವರು ಟಾರ್ಗೆಟ್ ಮಾಡುತ್ತಿದ್ದಾರೆ. ಇದರ ವಿರುದ್ಧ ಹುಬ್ಬಳ್ಳಿಯಲ್ಲಿ ದೊಡ್ಡ ಹೋರಾಟ ನಡೆಯಲಿದೆ. ವಿಪಕ್ಷ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಶಹರ ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ. ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.