ಅನಿಲ ಬಾಚನಹಳ್ಳಿ
ಕೊಪ್ಪಳ: ಜಿಲ್ಲೆಗೂ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅವಿನಾಭಾವ ಸಂಬಂಧವಿದ್ದು, ಸದ್ಯ ಜಿಲ್ಲೆಯ ಕೆಲವು ಅಭಿಮಾನಿಗಳು ಸಿದ್ದರಾಮಯ್ಯ ಜೀವನ ಚರಿತ್ರೆಯನ್ನು ಚಲನಚಿತ್ರ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯನವರು ಬದುಕಿನ ಏಳು-ಬೀಳುಗಳು ಹಾಗೂ ಸಾಧನೆಯ ಮೈಲುಗಲ್ಲುಗಳ ಕುರಿತು ಸಿನಿಮಾ ನಿರ್ಮಿಸಲು ಮಾಜಿ ಸಚಿವ ಶಿವರಾಜ ತಂಗಡಗಿಯವರ ಸ್ನೇಹಿತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಎಂ.ಎಸ್. ಕ್ರಿಯೇಷನ್ಸ್ ಅಡಿ ಮುಂದಾಗಿದ್ದಾರೆ. ಒಂದು ವಾರದ ಹಿಂದೆಯಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಅಭಿಮಾನಿಗಳು ಭೇಟಿ ಮಾಡಿ, ಚಲನಚಿತ್ರ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸಿದ್ದರಾಮಯ್ಯ ತಿರಸ್ಕರಿಸಿಯೂ ಇಲ್ಲ, ಒಪ್ಪಿಗೆಯನ್ನು ನೀಡಿಲ್ಲ. ತಾವು ಅಭಿನಯ ಮಾಡುವುದಿಲ್ಲ ಎಂದು ಮಾತ್ರ ಚಲನಚಿತ್ರ ತಂಡಕ್ಕೆ ತಿಳಿಸಿದ್ದಾರೆ. ಆದರೆ ಸಿದ್ದರಾಮಯ್ಯರ ಒಪ್ಪಿಗೆ ಪಡೆಯಲು ಮತ್ತೊಮ್ಮೆ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಭೇಟಿಗೆ ಸಮಯ ಕೇಳಿದ್ದು, ಇನ್ನೂ ಸಮಯ ನೀಡಿಲ್ಲ.
ಸಿದ್ದರಾಮಯ್ಯ ಭೇಟಿಗೆ ಡಿಸೆಂಬರ್ 6, 7, 8ನೇ ತಾರೀಖುಗಳಲ್ಲಿ ಒಂದು ದಿನಾಂಕ ಅಂತಿಮಗೊಳಿಸುವ ಸಾಧ್ಯತೆ ಇದ್ದು, ಬಳಿಕ ಸಿದ್ದರಾಮಯ್ಯ ತಮ್ಮ ಬಯೋಪಿಕ್‌ಗೆ ಒಪ್ಪಿಗೆ ನೀಡಿದ್ದಾರೋ ಅಥವಾ ತಿರಸ್ಕರಿಸಿದ್ದಾರೋ ಎಂಬುದು ಖಚಿತವಾಗಲಿದೆ.
ಬೆಂಗಳೂರಿನ ಸತ್ಯರತ್ನಂ ಈಗಾಗಲೇ ಚಿತ್ರಕಥೆ ಬರೆದಿದ್ದು, ಈ ಬಯೋಪಿಕ್ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ನಾಯಕನಾಗಿ ವಿಜಯ ಸೇತುಪತಿ ಸಿದ್ದರಾಮಯ್ಯನವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಒಪ್ಪಿಗೆ ನೀಡಿದರೆ ವಾರದಲ್ಲಿಯೇ ಚಲನಚಿತ್ರದ ಚಿತ್ರೀಕರಣ ಆರಂಭವಾಗಲಿದೆ.