ಸಿದ್ದರಾಮಯ್ಯನವರೇ ಮುಂದಿನ ಸಿಎಂ: ಮನಸೂರ ಶ್ರೀ ಭವಿಷ್ಯ

Advertisement

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಕೆಲ ವೇದಿಕೆಗಳಲ್ಲಿ, ಬೆಂಬಲಿಗರಲ್ಲಿ ಹೇಳಿಕೊಂಡಿದ್ದಾರೆ.
ಈ ನಡುವೆ ಶುಕ್ರವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮನಸೂರಿನ ರೇವಣಸಿದ್ದೇಶ್ವರಮಠದ ಬಸವರಾಜ ದೇವರು, ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಭವಿಷ್ಯ ನುಡಿದಿದ್ದಾರೆ!
ಕುಂದಗೋಳ ತಾಲ್ಲೂಕಿನ ಸಂಶಿಯಲ್ಲಿ ಶುಕ್ರವಾರ ಸಂಜೆ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡುವ ವೇಳೆ ಹೀಗೆ ಬಸವರಾಜ ದೇವರು ಭವಿಷ್ಯ ನುಡಿದಿದ್ದಾರೆ. ಹೀಗೆ ಸ್ವಾಮೀಜಿ ಹೇಳುತ್ತಿದ್ದಂತೆಯೇ ಸಮಾಜದ ಬಾಂಧವರು, ಸಿದ್ದರಾಮಯ್ಯ ಅವರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಕೆ ಹಾಕಿದರು. ಸಿದ್ದರಾಮಯ್ಯ ಸಾಹೇಬ್ರಿಗೆ ಜೈ ಎಂದು ಜೈಕಾರ ಹಾಕಿದರು.
ಈ ಜೈಕಾರದ ನಡುವೆಯೇ ಮಾತು ಮುಂದುವರಿಸಿದ ಶ್ರೀಗಳು, ಕರ್ನಾಟಕ ಕಂಡ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರು. 2023ರ ವಿಧಾನಸಭಾ ಚುನಾವಣೆ ನಡೆಯಲಿದೆ. ಬೀರಪ್ಪ ವಾಣಿಯಂತೆ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಮತ್ತೊಮ್ಮೆ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕ ವಿಧಾನಸೌಧದ ಮುಂದೆ ಡೊಳ್ಳು ಬಾರಿಸುವ ಮೂಲಕ ಭಂಡಾರ ಹಾರಿಸುತ್ತಾ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಸವರಾಜ ದೇವರು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಸಿದ್ದರಾಮಯ್ಯ ಗುಡುಗು
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ. ನಿಮ್ಮ ಉದ್ಧಾರಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಮ್ಮ ಸರ್ಕಾರ ಜನಪರ ಯೋಜನೆಗಳನ್ನು ತಂದಿತ್ತು. ಅನ್ನಭಾಗ್ಯ, ಕ್ಷೀರ ಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಟೀನ್ , ವಿದ್ಯಾಶ್ರೀ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೆವು. 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಆದರೆ, ಬಿಜೆಪಿ ಸರ್ಕಾರದಲ್ಲಿ ಒಂದು ಮನೆಯನ್ನೂ ಐದು ವರ್ಷದಲ್ಲಿ ನಿರ್ಮಿಸಲು ಆಗಿಲ್ಲ. ಇಂತಹ ಸರ್ಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದರು.