ಸಿದ್ದರಾಮೋತ್ಸವದಲ್ಲಿ ಸೇರಿದ ಜನಸ್ತೋಮವನ್ನು ನೋಡಿ ಬಿಜೆಪಿಗರು ಸಿದ್ದರಾಮಯ್ಯನವರ ವಯಸ್ಸಿನ ಬಗ್ಗೆ ಇಲ್ಲದ ತಕರಾರನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿರಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಧುರೀಣ, ಶಾಸಕ ಡಾ.ಎಚ್.ಕೆ. ಪಾಟೀಲ ಆರೋಪಿಸಿದರು.
ಗದುಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಇರಲಿ ಬಿಜೆಪಿಗರ ತಕರಾರು ಯಾಕೆ…?. ಸ್ವತಃ ಸಿದ್ದರಾಮಯ್ಯನವರೇ ತಮಗೆ 75 ವಯಸ್ಸು ಆಗಿದೆಯೆಂದು ಒಪ್ಪಿಕೊಂಡಿದ್ದಾರೆ. ತಾವು ಹುಟ್ಟಿದ್ದ ದಿನಾಂಕ ನಮ್ಮಪ್ಪ ಅಮ್ಮನಿಗೂ ಗೊತ್ತಿಲ್ಲ. ನನಗೂ ಗೊತ್ತಿಲ್ಲ ಶಾಲೆಯಲ್ಲಿನ ಶಿಕ್ಷಕರು ದಾಖಲಿಸಿದ್ದನ್ನೇ ತಾವು ನಂಬಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಅವರ ಜನ್ಮ ದಿನಾಂಕ ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ. ಎಲ್ಲ ಕಾಂಗ್ರೆಸ್ಸಿಗರು ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಬಿಜೆಪಿಗರು ಅನಗತ್ಯವಾಗಿ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆಂದು ಟೀಕಿಸಿದರು.