ಹುಬ್ಬಳ್ಳಿ: ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ಜಗದೀಶನಗರ ಸೇರಿದಂತೆ ವಿವಿಧ ನಗರಗಳ ಆಶ್ರಯ ಯೋಜನೆ ನಿವಾಸಿಗಳಿಗೆ ಮನೆ ಮತ್ತು ಹಕ್ಕು ಪತ್ರ ನೀಡಬೇಕು ಎಂದು ಮನವಿ ಸಲ್ಲಿಸಲು ಸಿಎಂ ಮನೆ ಎದುರು ಸೇರಿದ್ದ ಆಶ್ರಯ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಭೇಟಿ ದೊರೆಯದ ಹಿನ್ನೆಲೆಯಲ್ಲಿ ಎದೆ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಆಶ್ರಯ ಮನೆ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದಿಂದ ಮುಖ್ಯಮಂತ್ರಿ ಮನೆಗಳ ಮುಂದೆ ಧರಣಿಗೆ ಕೂತ ಪ್ರತಿಭಟನಾಕಾರರನ್ನು ಪೊಲೀಸರು ಮನವೊಲಿಸಿ ಎಬ್ಬಿಸಿದ್ದರು. ಆದರೆ, ಸಿಎಂ ಬೊಮ್ಮಾಯಿ ಅವರು ಮನವಿ ಪಡೆಯದೇ ತೆರಳಿದ್ದರಿಂದ ಮತ್ತು ಪೊಲೀಸರು ಮನವಿ ನೀಡಲು ಅವಕಾಶ ನೀಡದ್ದರಿಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಆಶ್ರಯ ನಿವಾಸಿಗಳ ನಡುವೆ ವಾಗ್ವಾದ ನಡೆಯಿತು.
ಒಕ್ಕೂಟದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಮಾತನಾಡಿ, ಆಶ್ರಯ ನಿವಾಸಿಗಳು ಹಲವಾರು ವರ್ಷದಿಂದ ಮನವಿ ಮಾಡುತ್ತಾ ಬರಲಾಗಿದೆ. ಆದರೆ ಬೇಡಿಕೆ ಈಡೇರಿಲ್ಲ. ಶಾಸಕರು ಜನರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಶಾಸಕರ ನಡೆಯನ್ನು ಖಂಡಿಸಿದರು.
ಪೊಲೀಸರು ಒಕ್ಕೂಟದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಅವರನ್ನು ಮನವಿ ಕೊಡಿಸಲು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದ ಘಟನೆ ನಡೆಯಿತು.