ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಆಡಳಿತ ನೀಡುತ್ತಿದ್ದು ಅವರನ್ನು ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಅವರನ್ನು ಬದಲಾಯಿಸುವ ಉದ್ದೇಶ ಇಲ್ಲ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ವಿಚಾರದ ಚರ್ಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಇತಿಶ್ರೀ ಹಾಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್ ಪಕ್ಷದ ಪಿತ್ತೂರಿ ಹಾಗೂ ಷಡ್ಯಂತ್ರ. ಮುಂದಿನ ವಿಧಾನಸಭೆ ಚುನಾವಣೆಯನ್ನು ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಇಂದು ನವದೆಹಲಿಯಲ್ಲಿ ಸುದ್ದಿಗಾರರರಿಗೆ ಈ ವಿಷಯ ಸ್ಪಷ್ಟಪಡಿಸಿದರು. ಇದರೊಂದಿಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ ಎಳೆದರು.
ಬಸವರಾಜ ಬೊಮ್ಮಾಯಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ರೈತರ ಪರವಾಗಿ, ಯುವಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಾಮನ್ ಮ್ಯಾನ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆ ಇಲ್ಲ ಎಂದು ಅರುಣ್ ಸಿಂಗ್ ಹೇಳಿದರು.