ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಕರ್ಮಕಾಂಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಗೊತ್ತಿದ್ದೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಎಚ್ಡಿಕೆ, ಈಗಾಗಲೇ ಪ್ರಕರಣದಲ್ಲಿ ಸುಮಾರು ೮೦ ರಿಂದ ೮೫ ಕೋಟಿ ರೂವಾಯಿ ರವಾನೆ ಆಗಿರುವ ಮಾಹಿತಿ ಇದೆ. ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಯೇ ಮಾಡಿರುವುದು ಎಂದು ಪುನರುಚ್ಚರಿಸಿದರು.
ಸರ್ಕಾರ ಮತ್ತು ಸಿಎಂ, ಡಿಸಿಎಂ ಗಮನಕ್ಕೆ ಒಂದೇ ಈ ಅಕ್ರಮ ನಡೆದಿದೆ. ಕೇವಲ ಒಂದು ಗಂಟೆಯಲ್ಲಿ ಹಣ ಬಿಡುಗಡೆಯಾಗಲು ಸಹಾಯ ಮಾಡಿದ್ದು ಯಾರು? ತೆಲಂಗಾಣದ ಚುನಾವಣೆಗೆ ಹೋಗಿರುವ ಹಣ ಇದು. ಅಲ್ಲಿಗೆ ಹೋಗಿ ಚುನಾವಣೆ ಉಸ್ತುವಾರಿ, ಜವಾಬ್ದಾರಿ ನಿರ್ವಹಿಸಿದವರು ಯಾರು? ಯಾರ ಯಾರ ಪಾತ್ರ ಏನಿದೆ? ಎಲ್ಲವೂ ಹೊರಗೆ ಬರಬೇಕು. ವಾಲ್ಮೀಕಿ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.