ಬೆಂಗಳೂರು: ತಿದ್ದುಪಡಿಯಾದ ಕನ್ನಡ ಸಾಹಿತ್ಯ ಪರಿಷತ್ ಬೈಲಾಗೆ ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಒಪ್ಪಿಗೆ ನೀಡಿದ್ದಾರೆ. ಬೈಲಾ ತಿದ್ದುಪಡಿಯಿಂದ ಕಸಾಪ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕಸಾಪವನ್ನು ಜನಸಾಮಾನ್ಯರ ಸಂಸ್ಥೆಯನ್ನಾಗಿ ಮಾರ್ಪಡಿಸುವ ಉದ್ದೇಶದಿಂದ ಹಳೇಬಿಡಿನ ಪುಷ್ಪಗಿರಿ ಮಠದ ಸಭಾಭವನದಲ್ಲಿ ಸೆ. ೩ರಂದು ನಡೆದ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆಯಲ್ಲಿ ಬೈಲಾಗೆ ತಿದ್ದುಪಡಿ ತರಲಾಗಿತ್ತು. ಬೈಲಾ ತಿದ್ದುಪಡಿಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ತಿದ್ದುಪಡಿ ಸಮಿತಿ ರಚನೆಯಾಗಿತ್ತು. ಜೂನ್ ೨೨, ೨೦೨೩ರಲ್ಲಿ ತುಮಕೂರಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಿತಿ ರಚಿಸಲಾಗಿತ್ತು. ಅಲ್ಲದೆ ಬೈಲಾ ತಿದ್ದುಪಡಿ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರಿಗೂ ಪತ್ರ ಬರೆದು ಮಾಹಿತಿ ನೀಡಲಾಗಿತ್ತು ಎಂದರು.