ಸಾವಿರಾರು ಜನರ ಮಧ್ಯೆ ಜರುಗಿದ ಹಿಂದೂ ಮಹಾಸಭಾ ಗಣೇಶನ ಶೋಭಾಯಾತ್ರೆ

ಶೋಭಾಯಾತ್ರೆ
Advertisement

ರಾಣೇಬೆನ್ನೂರು: ನಗರದ ಅಶೋಕ ಸರ್ಕಲ್ ಬಳಿ ವಿರಾಟ್ ಹಿಂದೂ ಮಹಾಸಭಾ ವತಿಯಿಂದ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಶೋಭಾಯಾತ್ರೆ ಬುಧವಾರ ನಗರದಲ್ಲಿ ಅದ್ಧೂರಿಯಾಗಿ ಜರುಗಿತು.
ಶಾಸಕ ಅರುಣಕುಮಾರ ಪೂಜಾರ ಮಧ್ಯಾಹ್ನ 1ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಿ ಮೂರ್ತಿಯಿರಿಸಲಾಗಿದ್ದ ಟ್ರ್ಯಾಕ್ಟರ್ ಚಲಾಯಿಸಿದರು. ಇಲ್ಲಿಂದ ಹೊರಟ ಶೋಭಾಯಾತ್ರೆಯು ಪೋಸ್ಟ್ ಸರ್ಕಲ್, ಸಂಗಮ್ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ರಂಗನಾಥನಗರ, ಸುಣಗಾರ ಓಣಿ, ಕೋಟ್ರೇಶ್ವರ ನಗರ, ಕುಂಬಾರ ಓಣಿ, ದೊಡ್ಡಪೇಟೆ, ಚಕ್ಕಿ ಮಿಕ್ಕಿ ಸರ್ಕಲ್, ಎಮ್.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣ, ವಿನಾಯಕ ನಗರ, ರಾಜರಾಜೇಶ್ವರಿ ನಗರ, ಹಳೆ ಪಿ.ಬಿ.ರಸ್ತೆಯ ಮೂಲಕ ಎನ್.ವಿ.ಹೋಟೆಲ್‌ವೆರಗೂ ಸಾಗಿಬಂದಿತು. ಅಲ್ಲಿಂದ ಮೂರ್ತಿಯನ್ನು ಹರಿಹರಕ್ಕೆ ತೆಗೆದುಕೊಂಡು ಹೋಗಿ ತುಂಗಾಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.
ಶೋಭಾಯಾತ್ರೆ ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ವಿವಿಧ ಸರ್ಕಲ್‌ಗಳಲ್ಲಿ ದಾನಿಗಳು ಮತ್ತು ವಿವಿಧ ಸಮಾಜಗಳ ವತಿಯಿಂದ ಸಾರ್ವಜನಿಕರಿಗೆ ಉಪಹಾರ, ಕುಡಿಯುವ ನೀರಿನ ಹಾಗೂ ಬಾಳೆಹಣ್ಣು ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ದುರ್ಗಾ ಸರ್ಕಲ್‌ನಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಶೋಭಾಯಾತ್ರೆಯಲ್ಲಿ ವಿವಿಧ ಬಗ್ಗೆಯ ಗೊಂಬೆಗಳು, ಸಮಾಳ, ಹಲಗೆ ಹಾಗೂ ಡಿಜೆ ಸಂಗೀತ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು. ಸಾವಿರಾರು ಯುವಕ, ಯವತಿಯರು ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಸಂಭ್ರಮಿಸಿದರು.