ಅಳ್ನಾವರ: ಪಟ್ಟಣ ಪಂಚಾಯತ ಆವರಣದಲ್ಲಿ ಅಂಟಿಸಲಾದ `ಉತ್ತರವಿಲ್ಲದ ಪ್ರಶ್ನೆ’ ಎಂಬ ತಲೆಬರಹವುಳ್ಳ ಭಿತ್ತಿ ಪತ್ರ ಎಲ್ಲರ ಗಮನ ಸೆಳೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಾರ್ಕ್‌ನಲ್ಲಿ ಸರಗಳ್ಳರಿದ್ದಾರೆ, ಪಾರ್ಕಿಂಗ್‌ನಲ್ಲಿ ವಾಹನ ಕಳ್ಳರಿದ್ದಾರೆ, ಬಸ್, ಟ್ರೇನ್ ನಿಲ್ದಾಣಗಳಲ್ಲಿ ಜೇಬುಗಳ್ಳರಿದ್ದಾರೆ ಎಚ್ಚರಿಕೆ ಎಂದು ಬೋರ್ಡ ಇರುತ್ತದೆ. ಆದ್ರೆ ಅಳ್ನಾವರ ಪಟ್ಟಣ ಪಂಚಾಯತದಲ್ಲಿ ಭೂ ಕಳ್ಳರು, ಮರಗಳ್ಳರು, ನಾಡುಗಳ್ಳರು, ಗಣಿ ಕಳ್ಳರು, ಮತಗಳ್ಳರು, ಕೆರೆಗಳ್ಳರು, ತೆರಿಗೆ ಕಳ್ಳರು, ಮೈಗಳ್ಳರಿದ್ದಾರೆ ಎಚ್ಚರಿಕೆ ಅನ್ನುವ ಬೋರ್ಡ್ ಯಾಕೆ ಹಾಕಲ್ಲ, ಇಂತಹ ಪ್ರಶ್ನೆಯೊಂದನ್ನು ಕೇಳುವ ಭಿತ್ತಿ ಪತ್ರವನ್ನು ಯಾರೋ ಒಬ್ಬರು ಅಳ್ನಾವರ ಪಟ್ಟಣ ಪಂಚಾಯತಿಯ ಆವರಣ ಗೋಡೆಗೆ ಅಂಟಿಸಿದ್ದಾರೆ.
ಈ ಭಿತ್ತಿ ಪತ್ರವನ್ನು ಓದಿದವರಿಗೆ ಭೂ ಕಳ್ಳರು, ಮರಗಳ್ಳರು, ನಾಡುಗಳ್ಳರು, ಗಣಿ ಕಳ್ಳರು, ಮತಗಳ್ಳರು, ಕೆರೆಗಳ್ಳರು, ತೆರಿಗೆ ಕಳ್ಳರು, ಮೈಗಳ್ಳರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಯಾರಿಗೆ ಅನ್ವಯಿಸುತ್ತದೆ ಎಂಬುದು ಕಾಡುತ್ತಿದೆ. ಇಂತಹ ಪ್ರಶ್ನೆಯನ್ನು ಕೇಳಿದ ವ್ಯಕ್ತಿ ಯಾರಿರಬಹುದೆಂಬ ಚರ್ಚೆಯೂ ನಡೆಯುತ್ತಿದೆ. ಇನ್ನೊಂದೆಡೆ ಈ ಭಿತ್ತಿ ಪತ್ರವನ್ನು ಗಾಂಧಿ ತಾತನ ಮುಖದ ಮೇಲೆ ಅಂಟಿಸಿರುವದಕ್ಕೆ ಅನೇಕರು ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.