ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಶೇಷ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಮೇಶ ಕತ್ತಿಯವರ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದಿಂದ ಗೌರವ ವಂದನೆ ಸಲ್ಲಿಸಿ ಕೆಲಹೊತ್ತು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಹತ್ತಕ್ಕೂ ಅಧಿಕ ಮಠಾಧೀಶರಿಂದ ಮಂತ್ರ ಪಠಣ ನೆರವೇರಿತು. ಇದೇ ಸಂದರ್ಭದಲ್ಲಿ ಉಮೇಶ್ ಕತ್ತಿ ಪತ್ನಿ, ಸೊಸೆ, ಮಗಳು, ಸಂಬಂಧಿಕರು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಸಚಿವ ಶಿವರಾಮ್ ಹೆಬ್ಬಾರ್, ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಾ. ವಿಶ್ವನಾಥ್ ಪಾಟೀಲ್ ಸೇರಿದಂತೆ ನೂರಾರು ರಾಜಕೀಯ ಮುಖಂಡರು ಉಮೇಶ ಕತ್ತಿಯವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ನಂತರ ಅಲಂಕೃತ ಸೇನಾ ವಾಹನದಲ್ಲಿ ಸ್ವಗ್ರಾಮ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯತ್ತ ಉಮೇಶ ಕತ್ತಿಯವರ ಪಾರ್ಥಿವ ಶರೀರವನ್ನು ರವಾನಿಸಲಾಯಿತು. ಈ ವೇಳೆ ರಸ್ತೆಯುದ್ಧಕ್ಕೂ ಅಭಿಮಾನಿಗಳು ನಿಂತುಕೊಂಡು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ನಂತರ ವಿಶ್ವರಾಜ್ ಶುಗರ್ಸ ಕಾರ್ಖಾನೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.