ಸಾಂಸ್ಕೃತಿಕ ಅಕಾಡೆಮಿ ರದ್ದತಿ ಕ್ರಮ ಸರಿಯಲ್ಲ

Advertisement

ಸರ್ಕಾರ ಬದಲಾದ ಕೂಡಲೇ ಎಲ್ಲ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಬದಲಿಸುವುದು ಸರಿಯಾದ ಕ್ರಮವಲ್ಲ. ಬರಗೂರು ರಾಮಚಂದ್ರಪ್ಪ ಸಮಿತಿ ವರದಿಯನ್ನು ಸರ್ಕಾರ ಈಗಾಗಲೇ ಅಂಗೀಕರಿಸಿದೆ. ಅದರಂತೆ ಹೊಸ ಸರ್ಕಾರ ಬಂದ ಕೂಡಲೇ ಅಕಾಡೆಮಿಗಳ ಪುನಾರಚನೆಗೆ ಕೈಹಾಕಬಾರದು. ಸಾಹಿತಿಗಳು ಮತ್ತು ಕಲಾವಿದರು ರಾಜಕೀಯ ಹಸ್ತಕ್ಷೇಪವಿಲ್ಲದೆ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಬೇಕು, ಇದು ಎಲ್ಲ ಸರ್ಕಾರಗಳಿಗೆ ಅನ್ವಯಿಸುವ ಮಾತು. ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮುನ್ನ ಸಾಂಸ್ಕೃತಿಕ ನೀತಿಯನ್ನು ಒಪ್ಪಿಕೊಳ್ಳುತ್ತದೆ. ಅಧಿಕಾರಕ್ಕೆ ಬಂದಕೂಡಲೇ ಈ ನಿಲುವು ಬದಲಾಗಿಹೋಗುತ್ತದೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ರಂಗದ ಪಾತ್ರ ಸೀಮಿತ. ಅದರಲ್ಲೂ ಪಕ್ಷ ರಾಜಕಾರಣ ಚುನಾವಣೆ ಕಾಲಕ್ಕೆ ಮಾತ್ರ ಸೀಮಿತಗೊಳ್ಳಬೇಕು. ಆಮೇಲೆ ಅದು ನೇಪಥ್ಯಕ್ಕೆ ಸರಿಯಬೇಕು. ಸರ್ಕಾರದ ಆಡಳಿತದಲ್ಲಿ ಪಕ್ಷ ರಾಜಕಾರಣ ನುಸುಳಬಾರದು. ಅದರಲ್ಲೂ ಸರ್ಕಾರ ರಚಿಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡಮಿಗಳಲ್ಲಿ ರಾಜಕೀಯ ನುಸುಳಬಾರದು. ಇದು ಹಿಂದಿನಿಂದ ಅನುಸರಿಸಿಕೊಂಡು ಬಂದಿದ್ದ ಸತ್ಸಂಪ್ರದಾಯ. ವಿವಿಧ ಅಕಾಡಮಿಗಳಿಗೆ ನೇಮಕಗೊಳ್ಳುತ್ತಿದ್ದ ಸಾಹಿತಿಗಳು ಮತ್ತು ಕಲಾವಿದರು ರಾಜಕೀಯ ನೆರಳೂ ಇಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಿಂದ ಕನ್ನಡ ಮತ್ತು ಸಂಸ್ಕೃತಿ ಕೆಲಸಗಳು ವಿಧಾನಸೌಧದಿಂದ ದೂರ ಉಳಿದುಕೊಂಡೇ ಬಂದಿತ್ತು.
ಕಾಲಾನಂತರ ಎಲ್ಲ ಅಕಾಡಮಿಗಳಿಗೆ ನೇಮಕ ಮತ್ತು ಅಧಿಕಾರಾವಧಿ ನಿಗದಿಪಡಿಸುವುದು ವಿಧಾನಸೌಧದಿಂದಲೇ ನಡೆಯುವ ಪದ್ಧತಿ ಜಾರಿಗೆ ಬಂದಿತು. ಇದರಿಂದ ಸರ್ಕಾರ ಬದಲಾದಂತೆ ಅಕಾಡಮಿಗಳನ್ನು ಪುನಾರಚಿಸುವ ಪದ್ಧತಿ ಬೆಳೆದುಬಂದಿತು. ಇದು ಸರಿಯಾದ ಕ್ರಮವಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತ ಬಂದಿದೆ. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲವೂ ಬದಲಾಗಿ ಹೋಗುತ್ತದೆ. ಸಾಹಿತಿಗಳು ಮತ್ತು ಕಲಾವಿದರಲ್ಲಿ ಕೆಲವರು ಓಲೈಕೆ ರಾಜಕೀಯ ಮಾಡಲು ಆರಂಭಿಸಿದರು. ಹೀಗಾಗಿ ವಿಧಾನಸೌಧ ಪ್ರದಕ್ಷಿಣೆ ಹಾಕದ ಸಾಹಿತಿಗಳು ಮತ್ತು ಕಲಾವಿದರು ದೂರವೇ ಉಳಿದರು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಮತ್ತೆ ಅಕಾಡಮಿಗಳನ್ನು ಪುನಾರಚಿಸುವ ಕೂಗು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಸಲ್ಲಿಸಿದ ವರದಿಯನ್ನು ಸ್ವೀಕರಿಸಲಾಗಿತ್ತು.
ಈ ವರದಿಯಂತೆ ಅಕಾಡಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಒಮ್ಮೆ ನೇಮಿಸಿದ ಮೇಲೆ ರಾಜಕೀಯ ಕಾರಣಗಳಿಗಾಗಿ ಬದಲಾಯಿಸಬಾರದು. ಪ್ರತಿ ಅಕಾಡಮಿಗೆ ನಿಗದಿತ ಅವಧಿಗೆ ನಾಮಕರಣ ಮಾಡಬೇಕು. ಒಮ್ಮೆ ನೇಮಕಗೊಂಡವರನ್ನು ಅವಧಿಗೆ ಮುನ್ನ ಬದಲಿಸಬಾರದು. ಅದೇರೀತಿ ಪ್ರತಿ ಅಕಾಡಮಿಯೂ ಅಧ್ಯಕ್ಷರು ಮತ್ತು ಸದಸ್ಯರು ಇಲ್ಲದೆ ಖಾಲಿ ಇರಬಾರದು. ವಿವಿಧ ಅಕಾಡಮಿಗಳಿಗೆ ನೇಮಕಗೊಂಡವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕೆ ಹೊರತು ತಮ್ಮ ಹುದ್ದೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಕೆಲವು ರಂಗಾಯಣ ಅಧ್ಯಕ್ಷರು ತಮ್ಮ ಕೆಲಸ ಬಿಟ್ಟು ರಾಜಕೀಯಕ್ಕೆ ಇಳಿದು ಇಡೀ ಕಲಾವಿದರೇ ತಲೆತಗ್ಗಿಸುವಂತೆ ಮಾಡಿದರು.ಅವರಿಗೆ ಅವಕಾಶ ನೀಡಬಾರದು. ಸಾಹಿತ್ಯ ಮತ್ತು ವಿವಿಧ ಕಲೆಗಳಿಗೆ ತನ್ನದೇ ಆದ ಸಾಂಸ್ಕೃತಿಕ ಇತಿಹಾಸ ಇದ್ದೇ ಇರುತ್ತದೆ. ರಾಜಕೀಯ ನಿಲುವುಗಳು ಬೇರೆ. ಸಾಹಿತ್ಯ ಚಟುವಟಿಕೆಗಳು ಬೇರೆ. ಇದನ್ನು ಅರಿತ ಕಲಾವಿದರು ತಮಗೆ ನೀಡಿದ ಹುದ್ದೆಯ ಇತಿಮಿತಿಯನ್ನು ತಿಳಿದುಕೊಂಡು ನಡೆಯುತ್ತಾರೆ. ಮತ್ತೆ ಕೆಲವರು ತಮ್ಮ ನೇಮಕಕ್ಕೆ ರಾಜಕೀಯವೇ ಕಾರಣ ಎಂದು ತಿಳಿಯುತ್ತಾರೆ. ಇಂಥವರನ್ನು ದೂರವಿಡುವುದು ಒಳಿತು. ಸಿದ್ದರಾಮಯ್ಯ ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಅವರಿಗೆ ಸಾಹಿತ್ಯ ಮತ್ತು ಸಂಸ್ಕೃತಿ ಎಂದರೇನು ಎಂಬುದನ್ನು ಹೇಳಿಕೊಡುವ ಅಗತ್ಯವಿಲ್ಲ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಬಂದವರು. ಅವರು ಅಕಾಡಮಿಗಳನ್ನು ರಾಜಕೀಯದಿಂದ ದೂರವಿಡುವ ಕೆಲಸ ಮೊದಲು ಮಾಡಬೇಕು. ಕಲೆ ಮತ್ತು ಸಂಸ್ಕೃತಿ ಜನ ಸಮುದಾಯಕ್ಕೆ ಸೇರಿದ್ದು. ಕಲಾ ಪ್ರಕಾರಗಳು ಹೂಕುಂಡಗಳಲ್ಲ. ಜನ ಸಮುದಾಯಗಳ ನಡುವೆ ಬೆಳೆಯುವಂತಹದು. ಅದಕ್ಕೆ ಬೇಕಾದ ಅನುದಾನ ನೀಡುವುದಷ್ಟೇ ಸರ್ಕಾರದ ಕೆಲಸ. ಸಂಗೀತ, ಸಾಹಿತ್ಯ ಮತ್ತಿತರ ಕಲೆಗಳಿಗೆ ರಾಜಕೀಯ ಬೇಲಿ ಹಾಕಲು ಬರುವುದಿಲ್ಲ. ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳು ಬಂಗಲೆಯಲ್ಲಿರುವ ಹಾಗೆ ಗುಡಿಸಲಿನಲ್ಲೂ ಇರುತ್ತದೆ ಎಂಬುದನ್ನು ಮರೆಯಬಾರದು.
ಪುತಿನ ಅವರು ಗೋಕುಲ ನಿರ್ಗಮನ' ಬರೆಯುವುದಕ್ಕೆ ದನ ಕಾಯುವ ಯುವಕ ಸಂಜೆಯ ವೇಳೆ ನುಡಿಸುತ್ತಿದ್ದ ಕೊಳಲು ಪ್ರೇರಣೆ ನೀಡಿತ್ತು ಎಂದರೆ ಕಲೆಯ ವಿಸ್ತಾರ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಒಂದು ಸರ್ಕಾರ ಬೆಳೆಸಲು ಸಾಧ್ಯವಿಲ್ಲ. ಅದುಭುವನದ ಭಾಗ್ಯ’ದಿಂದ ಬರುವಂತಹದು ಎಂಬುದನ್ನು ಹಿರಿಯರು ಅರಿತುಕೊಂಡು ಸಾಹಿತಿಗಳು ಮತ್ತು ಕಲಾವಿದರಿಂದ ಗೌರವ ಕೊಡುತ್ತಿದ್ದರು. ಸಾಂಸ್ಕೃತಿಕ ಲೋಕಕ್ಕೆ ಯಾವುದೇ ಅಡ್ಡಿ ಆತಂಕಗಳು ಇರಬಾರದು ಎಂದು ಅವರು ಭಾವಿಸಿದ್ದರು.ಈಗ ಮನೋಭಾವವೇ ಬದಲಾಗಿ ಹೋಗಿದೆ.