ಸವದಿ ಮೇಲೆ ವಿಶ್ವಾಸವಿದೆ

Advertisement

ಹುಬ್ಬಳ್ಳಿ: ಶಾಸಕ ಲಕ್ಷ್ಮಣ ಸವದಿ ಮತ್ತು ನನ್ನ ಒಡನಾಟ ಚೆನ್ನಾಗಿದೆ. ಸವದಿ, ಏನು ಹೇಳುತ್ತಾರೋ ಹಾಗೇ ನಡೆದುಕೊಳ್ಳುತ್ತಾರೆ. ಹೀಗಾಗಿ, ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ ಎಂದು ಲಕ್ಷ್ಮಣ ಸವದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ನಮ್ಮ ವರಿಷ್ಠರಿಗೂ ಸವದಿ ಅವರ ಮೇಲೆ ಅಪನಂಬಿಕೆ, ಸಂಶಯವಿಲ್ಲ. ಅವರು ನಮ್ಮ ಪಕ್ಷದಲ್ಲೇ ಮುಂದುವರೆಯುತ್ತಾರೆ. ಆದರೆ, ಜಗದೀಶ ಶೆಟ್ಟರ ಬಿಜೆಪಿಗೆ ವಾಪಸಾಗಿರುವುದು ಬೇಸರ ಮೂಡಿಸಿದೆ ಎಂದರು.
ಮಂಡ್ಯದ ಹನುಮ ಧ್ವಜ ವಿವಾದದ ಬಗ್ಗೆ ಮಾತನಾಡಿ, ಬಿಜೆಪಿ ನಾಯಕರು ಅಧಿಕಾರವಿಲ್ಲದೇ ಹತಾಶರಾಗಿದ್ದಾರೆ. ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಜನರ ಗಮನದಿಂದ ಯೋಜನೆಗಳನ್ನು ದೂರ ಮಾಡಬೇಕೆಂಬ ಉದ್ದೇಶದಿಂದ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ, ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಬಿಜೆಪಿಗರ ಜೊತೆ ಸೇರಿಕೊಂಡು ಪ್ರತಿಭಟನೆ ಮಾಡುತ್ತಿರುವುದು ದುರದೃಷ್ಟಕರ ಎಂದರು.